‘ಶಿಕ್ಷಕರ ಸಮಸ್ಯೆಗೆ ಸರ್ಕಾರದ ಸ್ಪಂದನ’ – ಡಾ||ವೈ.ಎ.ನಾರಾಯಣಸ್ವಾಮಿ

 ಮಧುಗಿರಿ :

      ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ನಿಮ್ಮ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ನಿಮ್ಮ ಸಹಾಯಕ್ಕೆ ಸದಾ ಕಾಲ ನಾವುಗಳು ಮತ್ತು ನಮ್ಮ ಸರಕಾರ ಸ್ಪಂದಿಸುತ್ತದೆ. ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.

      ಅವರು ಪಟ್ಟಣದ ಚೇತನ ಶಾಲೆಯಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಚಿದಾನಂದ್ ಎಂ.ಗೌಡ ಮತ್ತು ವೈ.ಎ.ಎನ್. ಅಭಿಮಾನಿ ಬಳಗದ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ 5 ಸಾವಿರ ರೂ. ಪ್ಯಾಕೇಜ್ ನೀಡಿದ್ದು, ಇದು ದೇಶದಲ್ಲೇ ಮೊದಲು. ಇನ್ನೂ ಹೆಚ್ಚುವರಿಯಾಗಿ 25 ಸಾವಿರ ರೂ.ಗಳನ್ನು ನೀಡುವಂತೆ ಸಿ.ಎಂ.ರವರನ್ನು ಒತ್ತಾಯಿಸಿದ್ದೇನೆ. ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ನೆರವಾಗಲಿದೆ. ಮಾಹಿತಿಯಂತೆ ಶಿಕ್ಷಕರಿಗೆ ಪರಿಹಾರ ಕೊಡಲು ಬಿ.ಇ.ಓಗಳು ಕಛೇರಿಗೆ ಅಲೆದಾಡಿಸದೆ, ಖಾತೆಗೆ ಜಮೆ ಮಾಡಬೇಕು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಶಿಬಿರ ಏರ್ಪಡಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಡಿ.ಡಿ.ಪಿ.ಐ.ರವರಿಗೆ ಸೂಚಿಸಲಾಗಿದೆ. ಶಿಕ್ಷಕ ಸಮುದಾಯವನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ, ಮೃತ ಪಟ್ಟ ಶಿಕ್ಷಕರಿಗೆ 30 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಮೂರನೆ ಅಲೆ ಪ್ರಾರಂಭವಾದರೆ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ತೆಲಂಗಾಣ ಮಾದರಿಯಂತೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯ ಧನ ಹಾಗೂ 25 ಕೆಜಿ ಅಕ್ಕಿ ವಿತರಿಸಲು ಸರಕಾರವನ್ನು ಒತ್ತಾಯಿಸಿದ್ದೇನೆ ಎಂದರು.

      ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಖಾಸಗಿ ಶಾಲೆಗಳಿಗೆ ಶಿಕ್ಷಕರೆ ಮುಖ್ಯ ಅಧಾರ ಸ್ತಂಭವಾಗಿದ್ದು, ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಬಾರದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿ ಠೇವಣಿಯಾಗಿಟ್ಟಿರುವ ಹಣವನ್ನು ಬಳಸಿಕೊಳ್ಳಬೇಕು. ಕೊರೋನಾ ಅಲೆಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಬೇಕು. ಸರಕಾರ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದು, ಗುಣಮಟ್ಟದ ಶಿಕ್ಷಣವೂ ದೊರೆಯುತ್ತಿದೆ. ಇನ್ನೊಂದು ವಾರದಲ್ಲಿ ಮಧುಗಿರಿ ಪಟ್ಟಣದ ಸರಕಾರಿ ಅಸ್ಪತ್ರೆಗೆ ನನ್ನ ಅನುದಾನದಲ್ಲಿ ಐ.ಸಿ.ಯು ಮೊಬೈಲ್ ಆ್ಯಂಬ್ಯುಲೆನ್ಸ್ ನೀಡುತ್ತಿರುವುದಾಗಿ ತಿಳಿಸಿದರು.
ಶೈಕ್ಷಣಿಕ ಜಿಲ್ಲೆಯ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಉಪಾಧ್ಯಕ್ಷ ತುಂಗೋಟಿ ರಾಮಣ್ಣ, ಕಾರ್ಯದರ್ಶಿ ಜಗದೀಶ್ ಕುಮಾರ್, ಚಿರಕ್ ಶಾಲೆ ಭಾಸ್ಕರ್ ರೆಡ್ಡಿ, ಬಿ.ಇ.ಓ. ನಂಜುಂಡಯ್ಯ, ಶಿಕ್ಷಣಾಧಿಕಾರಿ ಪ್ರಾಣೇಶ್, ಸಿದ್ದೇಶ್ವರ, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ಫ್ರೌಡಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೆಂಕಟರಾಮು, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಎಂ.ಶಿವಲಿಂಗಪ್ಪ, ಜಗದೀಶ್, ನರೇಂದ್ರ, ಧನಂಜಯ ಪಟೇಲ್ ಹಾಗೂ ಮತ್ತಿತರರು ಇದ್ದರು.

ಪತ್ರಕರ್ತರಿಗೆ ಪ್ಯಾಕೇಜ್ ನೀಡಲು ಆಗ್ರಹ :

      ಲಾಕ್‍ಡೌನ್ ಹಿನ್ನೆಲೆಯಲ್ಲಿ ಫ್ರ್ರಂಟ್ ಲೈನ್ ವಾರಿಯರ್‍ಗಳಾದ ಪತ್ರಕರ್ತರು ಸಹ ಆರ್ಥಿಕ ಸಂಕಷ್ಟದಲ್ಲಿದ್ದು, ಪತ್ರಕರ್ತರಿಗೂ ಸಹ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಲಾಗುವುದು.

– ಡಾ.ವೈ.ಎ.ನಾರಾಯಣ್ ಸ್ವಾಮಿ, ವಿಧಾನ ಪರಿಷತ್ ಸದಸ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link