ಮಧುಗಿರಿ :
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ವಿಠಲಾಪುರ ಗ್ರಾಮದ ಕೆರೆಯ ಜಾಗವನ್ನು ಸುಮಾರು 10 ಎಕರೆಯಷ್ಟು ಕೆಲವರು ಒತ್ತುವರಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮ ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಮಾನ್ಸೂನ್ ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ದೃಷ್ಟಿಯಿಂದ ಅತ್ಯವಶ್ಯಕವೆಂದು ಪ್ರಾಚೀನ ಕಾಲದಿಂದಲೂ ಜನ ಸಮುದಾಯಗಳು ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದ್ದಾರೆ.
ಕೆರೆಗಳ ನಿರ್ಮಾಣಕ್ಕೆ ಅನೇಕ ಕಾರಣಗಳು ಇವೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಹಾಗೂ ಜನ ಜಾನುವಾರುಗಳಿಗೆ, ಗ್ರಾಮಗಳ ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇರುವುದರಿಂದ, ಸ್ಥಳೀಯ ಬೆಟ್ಟ ಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ ಹಳ್ಳಗಳನ್ನು ಗಮನಿಸಿ ತಗ್ಗು ಪ್ರದೇಶಗಳಲ್ಲಿ ಹಳೆಯ ಸಂಪ್ರಾದಾಯಗಳಂತೆ ಮಳೆಯ ನೀರನ್ನು ಸಂಗ್ರಹಿಸಿಡುವುದು ವಾಡಿಕೆಯಾಗಿದೆ. ಕೆರೆ ನಿರ್ಮಾಣವು ಗ್ರಾಮೀಣರ ಒಂದು ಕಲೆಯಾಗಿದೆ.
ದೊಡ್ಡೇರಿ ಹೋಬಳಿಯ ಕೊಟಗಾರ್ಲಹಳ್ಳಿಯ ಗ್ರಾಪಂ ವ್ಯಾಪ್ತಿಯ ವಿಠಲಾಪುರ ಗ್ರಾಮದ ಸ.ನಂ.115 ರಲ್ಲಿ ಕೆರೆಯ ಅಂಗಳ ಸುಮಾರು 39 ಎಕರೆ 35 ಗುಂಟೆಯಷ್ಟು ವಿಸ್ತೀರ್ಣ ಹೊಂದಿದೆ. ಆದರೆ ಗ್ರಾಮದ ಹಾಗೂ ಅಕ್ಕ-ಪಕ್ಕದ ಜಮೀನಿನ ಕೆಲವರು 10 ಎಕರೆಯಷ್ಟು ಕೆರೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ.
ಭಾರತೀಯ ಸಂವಿಧಾನದ 39(ಬಿ)2 48ಎ3 ಮತ್ತು 5,ಎ(ಜಿ)4 ಪರಿಚ್ಛೇದಗಳನ್ನು ಆಧರಿಸಿ ಇ.ಎಸ್.ಜಿ.ಯು ಕಾನೂನಿನ ವ್ಯಾಪ್ತಿಯಲ್ಲಿ ಕೆರೆಗಳು ಸಾರ್ವಜನಿಕ ಸ್ವತ್ತುಗಳು ಎಂದು ತಿಳಿಸಿರುತ್ತದೆ. ಹಾಗಾಗಿ ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮೂರ ಕೆರೆಯ ಪರಿಕಲ್ಪನೆ ಆದೇಶವನ್ನು ಪಾರಿಪಾಲಿಸುವ ನಿಟ್ಟಿನಲ್ಲಿ ಕಾರ್ಯಯೋಜಿತರಾಗಿ ಸಾರ್ವಜನಿಕ ಸ್ವತ್ತನ್ನು ಉಳಿಸಬೇಕಾಗಿದೆ.
ಈ ಕೆರೆಗಳನ್ನು ಸಮುದಾಯ ಆಧಾರಿತ ಸಣ್ಣಕೆರೆಗಳ ಪುಶ್ಚೇತನ ಯೋಜನೆ, ಜಲ ಸಂವರ್ಧನಾ ಯೋಜನೆ ಇತ್ಯಾದಿಗಳು ಇದ್ದರೂ, ಪ್ರಭಾವಿಗಳು ತಮ್ಮ ಸ್ವ್ವಾರ್ಥಕ್ಕಾಗಿ ಸಾರ್ವಜನಿಕ ಆಸ್ತಿಯಾಗಿರುವ ಕೆರೆಗಳ ಮೇಲೆ ಕಣ್ಣಿಟ್ಟು ಕೆರೆಗೆ ಬರುವ ಹಳ್ಳ ತೊರೆಗಳ ದಿಕ್ಕನ್ನು ಬದಲಾಯಿಸಿ ಕೆರೆಗಳಿಗೆ ನೀರು ಹರಿಯದಂತೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 38401/2014 ರಿಟ್ ಅರ್ಜಿ ಸಂಖ್ಯೆ ಛಿ/ತಿ 11044/2018(ಎಲ್‍ಬಿ-ಆರ್‍ಎಸ್) ಪ್ರಕರಣಕ್ಕೆ ಸಂಬಂಧಿಸದಂತೆ ದಿ. 13.01.2020ರಂದು ನಡೆದ ವಿಚಾರಣೆಯಲ್ಲಿ ಮಾನ್ಯ ಉಚ್ಛನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 817/2008, ಛಿ/ತಿ 1369/2009, 31343/95, 18030/2005 ಮತ್ತು 6036/2006 ಪ್ರಕರಣಗಳಲ್ಲಿ ಕೆರೆಗಳ ಸಂಕರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೆ 2008ರಲ್ಲಿ ನೀಡಿರುವ ಆದೇಶವನ್ನು ಸಮರ್ಪಕವಾಗಿ ಪಾಲನೆ ಮಾಡದೆ ಇರುವುದರಿಂದ ಸ್ವಯಂ ಪ್ರೇರಿತವಾಗಿ ನ್ಯಾಯಾಂಗನಿಂದನಾ ಪ್ರಕರಣವನ್ನು ದಾಖಲಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದೆ.
ಕೆರೆಗಳು ಸರಕಾರದ ಸ್ವತ್ತು ಎಂದು ಘೋಷಿಸಲ್ಪಟ್ಟಿರುವುದರಿಂದ ಈ ಕೆರೆಯ ಅತಿಕ್ರಮ ಪ್ರವೇಶ, ಒತ್ತುವರಿ ಮಾಡುವವರು ಕರ್ನಾಟಕ ಭೂ ಕಂದಾಯ ಅಧಿ ನಿಯಮ 1964 ಕಲಂ 192ರ ಪ್ರಕಾರ ಶಿಕ್ಷಿಸಲ್ಪಡುವ ಅಧಿಕಾರವನ್ನು ತಹಸೀಲ್ದಾರ್‍ಗೆ ನೀಡಲಾಗಿದೆ.
ಯಾವುದೇ ಮುಲಾಜಿಲ್ಲದೆ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿನ ಎಲ್ಲಾ ಕೆರೆಗಳ ಒತ್ತುವರಿಯನ್ನು ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದ ಆದೇಶದನ್ವಯ ಸಮಯ ನಿಗದಿಗೊಳಿಸಿದ್ದು, ಕೆರೆಗಳ ಒತ್ತುವರಿ ತೆರವಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೊ ಕಾದು ನೋಡಬೇಕಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ. ಕೆರೆಯು ಸ.ನಂ. ನಲ್ಲಿರುವುದರಿಂದ ಆದಷ್ಟೂ ಬೇಗ ಅರ್ಜಿಯನ್ನು ತಹಸೀಲ್ದಾರ್‍ರವರ ಮುಂದಿನ ಕ್ರಮಕ್ಕೆ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಅವರ ನಿರ್ದೇಶನದಂತೆ ಗ್ರಾಪಂ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಕುಮಾರಸ್ವಾಮಿ, ಪಿಡಿಓ, ಕೊಟಗಾರ್ಲಹಳ್ಳಿ.
ಒತ್ತುವರಿಯಾಗಿರುವ ಕೆರೆ ಕುಂಟೆಗಳನ್ನು ತೆರೆವುಗೊಳಿಸುವಂತೆ ಸರ್ಕಾರ ಈಗಾಗಲೆ ಆದೇಶ ಹೊರಡಿಸಿದೆ. ಆದರೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಒತ್ತುವರಿದಾರರ ಪರವಾಗಿವೆ. ಮುಂದಿನ ದಿನಗಳಲ್ಲಿ ಒತ್ತುವರಿಯಾಗಿರುವ ಕೆರೆ-ಕುಂಟೆಗಳನ್ನು ತೆರವುಗೊಳಿಸುವವರೆವಿಗೂ ಜಿಲ್ಲಾಧಿಕರಿಗಳ ಕಛೇರಿ ಮುಂದೆ ಅನಿರ್ದಷ್ಠಾವಧಿ ಕಾಲದವರೆಗೆ ಶೀಘ್ರದಲ್ಲಿಯೇ ಧರಣಿ ನಡೆಸಲಾಗುವುದು.
-ಹಂದ್ರಾಳು ನಾಗಭೂಷಣ್, ಸಾಮಾಜಿಕ ಕಾರ್ಯಕರ್ತ.
