ಮಧುಗಿರಿ :
ಮುಂದಿನ 3 ವರ್ಷದೊಳಗೆ ತಾಲ್ಲೂಕಿನ 1100 ಎಕರೆ ಪ್ರದೇಶದಲ್ಲಿ 85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ ಸೇರಿದಂತೆ ಬರಪಿಡಿತ ಪ್ರದೇಶವಾಗಿರುವ ಮಧುಗಿರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ತಾಲ್ಲೂಕು ಆಡಳಿತ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು. ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಧುಗಿರಿ ತಾಲೂಕು ಅತಿ ಹಿಂದುಳಿದ ತಾಲ್ಲೂಕಾಗಿದ್ದು, ಪ್ರತಿ ನಿತ್ಯ ಸಾವಿರಾರು ಕಾರ್ಮಿಕರು ಉದ್ಯೋಗ ಅರಸಿ ದೊಡ್ಡಬಳ್ಳಾಪುರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ನಗರಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಇದನ್ನು ಮನಗಂಡು ತಾಲ್ಲೂಕಿನ ಜನತೆಗೆ ಉದ್ಯೋಗ ಒದಗಿಸಿಕೊಡುವ ಉದ್ದೇಶದಿಂದ, ಇಡೀ ರಾಜ್ಯದಲ್ಲೇ ಒಂದು ಜಿಲ್ಲೆಗೆ ಮಾತ್ರ ನೀಡುವ ಜವಳಿ ಪಾರ್ಕ್ನ್ನು ಮಧುಗಿರಿಗೆ ತರಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಮುಂದಿನ 3 ವರ್ಷದೊಳಗೆ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಸುಮಾರು 75 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಿ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ಅದರ ವಿವರ ಈಗಲೇ ಹೇಳಿ ಬಿಟ್ಟರೆ ಕೆಲವರು ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಾರೆ ಎಂದರು.
ಅಸಂಘಟಿತ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 1 ಲಕ್ಷ ಕೋಟಿ ರೂ. ಅನುದಾನ ನೀಡಿ 85 ಕೋಟಿ ಕಾರ್ಮಿಕರು, ಮಧ್ಯಮ ವರ್ಗದವರಿಗೆ ಆಹಾರದ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಗೆ 7 ಸಾವಿರ ಆಹಾರ ಕಿಟ್ಗಳನ್ನು ನೀಡಿದ್ದು, ಅತಿ ಹಿಂದುಳಿದ ಪ್ರದೇಶವಾಗಿರುವ ಮಧುಗಿರಿ ತಾಲ್ಲೂಕಿಗೆ 3 ಸಾವಿರ ಕಿಟ್ಗಳನ್ನು ನೀಡಿದ್ದೇನೆ. ತಾಲ್ಲೂಕಿನ ಜನತೆ ನನಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ 1.5 ಟಿಎಂಸಿ ನೀರು ಹರಿಯಲಿದ್ದು, ಇದರ ಜೊತೆಗೆ ಗೂಬಲಗುಟ್ಟೆ ಸಮೀಪ ಡ್ಯಾಂ ನಿರ್ಮಿಸಿ ವಿವಿಧ ಮೂಲಗಳಿಂದ 3 ಟಿಎಂಸಿ ನೀರು ತಂದು ಒಟ್ಟು 4.5 ಟಿಎಂಸಿ ನೀರು ಸಂಗ್ರಹಿಸಿ ಪುರವರ ಬಳಿಯ ಕೆರೆ ಅಗಲೀಕರಣಗೊಳಿಸಿ, ನೀರು ಹರಿಸಿದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ದೊರೆಯಲಿದೆ. ಆಗ ಕೃಷಿ ಕ್ಷೇತ್ರ ಹೆಚ್ಚು ಅಭಿವೃದ್ಧಿ ಕಾಣಲಿದೆ. ಈ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುತ್ತೇನೆ ಎಂದರು.
ಅಭಿವೃದ್ದಿಗೆ ಶಾಸಕರು ಸಹಕಾರ ನೀಡುತ್ತಿಲ್ಲ :
ಇಲ್ಲಿನ ಶಾಸಕ ಕೇವಲ ಬುರುಡಾಲಜಿಯನ್ನು ಕ್ಷೇತ್ರದ ಜನರಿಗೆ ಬಿಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡುತ್ತಿಲ್ಲ. ಕೇಂದ್ರದ ಪಿ.ಎಂ.ಜಿ.ಎಸ್.ವೈ ಯೋಜನೆಯನ್ನು ನಾನೆ ತಂದಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಸಬಾ ವ್ಯಾಪ್ತಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ನಾನು ಬಹಳಷ್ಟು ಶ್ರಮ ವಹಿಸಿದ್ದು, ಹೇಮಾವತಿ ನೀರಿನ ಮೋಟರ್ ಪಂಪ್ಸೆಟ್ ಜಾಕ್ವೆಲ್ ಎಲ್ಲಿದೆ ಎಂಬುದೇ ಗೊತ್ತಿಲ್ಲದ ಇಲ್ಲಿನ ಶಾಸಕರು, ನನ್ನ ಮೇಲೆ ಪಂಪ್ಸೆಟ್ ಕಳವು ಮಾಡಿಸಿರುವ ಆರೋಪ ಮಾಡುತ್ತಿದ್ದು, ಇವರು ಯಾರ ಸಹಕಾರದಿಂದ ಶಾಸಕರಾದರು ಎಂಬುದನ್ನು ಮೊದಲು ನೆನಪು ಮಾಡಿಕೊಳ್ಳಲಿ. ಮೋಟಾರ್ ಪಂಪ್ಸೆಟ್ ಕಳುವು ಮಾಡಿಸುವಷ್ಟು ಕೀಳು ಮಟ್ಟದ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ. ಇವರಿಗೆ ನನ್ನ ಬೆಂಬಲ ಪಡೆದು ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ. ಅಧಿಕಾರಿಗಳು ಎಂ.ಎಲ್.ಎ ಆದರೆ ಹೀಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ಜಿಲ್ಲೆಯಲ್ಲೇ ಅತೀ ಹಿಂದುಳಿದ ಪ್ರದೇಶವಾದ ಮಧುಗಿರಿ ಕ್ಷೇತ್ರದ ಅಭಿವೃದ್ದಿಗೆ ಬದ್ಧನಾಗಿದ್ದೇನೆ
– ಜಿ.ಎಸ್. ಬಸವರಾಜು, ಸಂಸದ.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ, ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಪ್ರಸಾದ್, ಉಪ ತಹಸೀಲ್ದಾರ್ ವರದರಾಜು, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಕಾರ್ಮಿಕ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಸುಭಾಷ್ ಎಂ ಆಲದಕಟ್ಟೆ, ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಸುಜಾತ, ನಟರಾಜು, ಆಸಿಯಾಬಾನು, ಮುಖಂಡರಾದ ಎಂ.ಎಸ್. ಶಂಕರನಾರಾಯಣ್, ಎಂ.ಜಿ. ಉಮೇಶ್, ಎಂ.ವಿ.ಮಂಜುನಾಥ್, ಎಸ್ಬಿಟಿ ರಾಮು, ಆನಂದ್, ಷಹಾಜು, ಎಂ.ಜಿ.ಶ್ರೀನಿವಾಸಮೂರ್ತಿ, ಜಿಲ್ಲಾ ಬಾಲಕಾರ್ಮಿಕರ ಸಮನ್ವಯಾಧಿಕಾರಿ ರವಿಕುಮಾರ್ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ