ಮಧುಗಿರಿ :
ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನಪಯರ್ಂತ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ತಿಳಿಸಿದರು.
ಅವರು ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಮಧುಗಿರಿ ಉಪವಿಭಾಗದ ವ್ಯಾಪ್ತಿಯ ರೌಡಿಶೀಟರ್‍ಗಳ ಮತ್ತು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಪೆರೇಡ್ ನಡೆಸಿ, ಹಲವು ಸೂಚನೆಗಳನ್ನು ನೀಡಿ ಮಾತನಾಡಿದರು. ನೀವು ಮಾಡಿರುವ ತಪ್ಪಿನಿಂದ ನಿಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ನೀವುಗಳು ಯಾವುದೋ ಸಂದರ್ಭದಲ್ಲಿ ರೌಡಿ ಶೀಟರ್‍ಗಳಾಗಿದ್ದೀರಿ. ಮುಂದಿನ ದಿನಗಳಲ್ಲಿ ಮತ್ತೆ ಕಷ್ಟಪಟ್ಟು ದುಡಿದು ಸಮಾಜದಲ್ಲಿ ಒಳ್ಳೆಯವರಾಗಿ ಜೀವನ ನಡೆಸಿ ಕುಟುಂಬದೊಂದಿಗೆ ನೆಮ್ಮದಿಯ ವಾತಾವರಣ ನಿರ್ಮಿಸಿಕೊಳ್ಳಿ. ರೌಡಿಶೀಟರ್‍ಗಳು ಪದೆ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರೌಡಿಶೀಟರ್ ಗುಂಪಿನಲ್ಲಿದ್ದ ಮಟ್ಕಾ ಚೀಟಿ ಬರೆಯುವವರನ್ನು ಪ್ರತ್ಯೇಕವಾಗಿ ನಿಲ್ಲಿಸಿದರು. ಅದರಲ್ಲೂ ಉಪವಿಭಾಗದ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ದಂಧೆ ಬಹಳಷ್ಟು ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನೀವುಗಳು ನಿಮಗೆ ದುಡಿಮೆ ಇಲ್ಲದೆ ಇಂತಹ ಕೆಲಸ ಮಾಡುತ್ತಿದ್ದೀರಿ ಎಂಬ ಆರೋಪಗಳು ಕೇಳಿಬಂದಿವೆ. ಸಮಾಜದಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಬಹಳಷ್ಟು ಕೆಲಸಗಳಿವೆ. ಕೂಲಿ ಕೆಲಸ ಮಾಡಿ ಜೀವನ ರೂಪಿಸಿಕೊಳ್ಳಬಹುದು. ಪಾವಗಡ ತಾಲ್ಲೂಕು ಜಿಲ್ಲಾ ಕೇಂದ್ರಕ್ಕೆ ದೂರವಿದೆ, ಯಾರೂ ಗಮನಹರಿಸುವುದಿಲ್ಲ ಎಂದು ಭಾವಿಸಿ ಮತ್ತೆ ನೀವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯಲ್ಲಿ ಎಲ್ಲಿಯೂ ಮತ್ತೆ ಮಟ್ಕಾ ದಂಧೆ ಪ್ರಕರಣಗಳು ಮರುಕಳಿಸ ಬಾರದು ಎಂದರು.
ಮಧುಗಿರಿ ಉಪವಿಭಾಗದಲ್ಲಿ ಸಮಾಜದಲ್ಲಿ ಸನ್ನಡತೆಯಿಂದ ಇರುವವರ ಬಗ್ಗೆ ಈಗಾಗಲೆ ನಮ್ಮ ಇಲಾಖೆ ಮಾಹಿತಿ ಸಂಗ್ರಹಿಸಿದೆ. ರೌಡಿ ಶೀಟರ್‍ಗಳಾಗಿ ಗುರುತಿಸಿಕೊಂಡವರು ಉತ್ತಮ ನಡವಳಿಕೆ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ರೌಡಿಶೀಟರ್‍ನಿಂದ ಹೊರತೆಗೆಯಲು ಡಿವೈಎಸ್ಪಿ ಕೆ.ಜೆ. ರಾಮಕೃಷ್ಣರವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ರೌಡಿ ಶೀಟರ್ ಪಟ್ಟಿಯಿಂದ ತೆಗೆದವರು ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಪೊಲೀಸ್ ಇಲಾಖೆ ಅಂತಹವರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ. ಅದೇ ಚಾಳಿ ಮುಂದುವರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇಲ್ಲಿರುವ ಕೆಲವು ರೌಡಿಶೀಟರ್‍ಗಳು ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿದ್ದರೂ, ಸಮಾಜದಲ್ಲಿ ರೌಡಿಶೀಟರ್ ಎಂದು ಗುರುತಿಸಿಕೊಳ್ಳುತ್ತಿರುವುದರಿಂದ ನಿಮಗೆ ಅವಮಾನ ಆಗುವ ಸಂಭವ ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಪೆರೇಡ್ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಪೆರೇಡ್ ನಂತರ ಮಧುಗಿರಿ ಪಟ್ಟಣದ ಶಿರಾ ಗೇಟ್ ಬಳಿಯಿರುವ ಪೋಲೀಸ್ ವಸತಿ ಗೃಹಗಳ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ, ಅನುಪಯುಕ್ತವಾಗಿರುವ ವಸತಿಗೃಹಗಳನ್ನು ಹೊಡೆದು ಹಾಕಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎ.ಎಸ್.ಪಿ ಉದೇಶ್, ಡಿವೈಎಸ್ಪಿ ಕೆ.ಜೆ ರಾಮಕೃಷ್ಣ, ಸಿಪಿಐಗಳಾದ ಮಧುಗಿರಿಯ ಎಂ.ಎಸ್. ಸರ್ದಾರ್, ಬಡವನಹಳ್ಳಿಯ ಹನುಮಂತರಾಯಪ್ಪ, ಪಿಎಸ್‍ಐ ಮಂಗಳ ಗೌರಮ್ಮ, ಕೊರಟಗೆರೆಯ ಸಿದ್ದರಾಮೇಶ್ವರ, ಪಾವಗಡದ ಲಕ್ಷ್ಮೀಕಾಂತ್, ತಿರುಮಣಿಯ ಕಾಂತಾರೆಡ್ಡಿ, ಮಹಾಲಕ್ಷ್ಮಮ್ಮ, ನವೀನ್, ಮುತ್ತುರಾಜ್, ವೈ.ಎನ್. ಹೊಸಕೋಟೆಯ ಭಾರತಿ ಮತ್ತು ಸಿಬ್ಬಂದಿ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ