ಕದ್ರಿ ಲೇಪಾಕ್ಷಿ ತಳಿ ಶೇಂಗಾ ಬೆಳೆ : ಗಮನ ಸೆಳೆದ ಯುವ ರೈತ

 ಮಧುಗಿರಿ : 

      ಸತತ ಬರಗಾಲದ  ಹಣೆಪಟ್ಟಿಯನ್ನು ಹೊತ್ತಿರುವ ತಾಲ್ಲೂಕಿನಲ್ಲಿ ಆಂಧ್ರ ಮೂಲದ ಕದ್ರಿಲೇಪಾಕ್ಷಿ ಹೆಸರಿನ ಶೇಂಗಾ ತಳಿಯ ಬೆಳೆ ಬೆಳೆಯುವುದರ ಮೂಲಕ ಯುವ ರೈತ ಕುಟುಂಬವೊಂದು ಆರ್ಥಿಕವಾಗಿ ಕೃಷಿಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದೆ.

      ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಚೀಲನಹಳ್ಳಿಯ ರೈತರಾದ ರಂಗನಾಥ್ ಯಾದವ್ ಕುಟುಂಬ ಕಳೆದ ಬಾರಿ ಆಂಧ್ರದ ಲೇಪಾಕ್ಷಿಯಿಂದ ಖರೀದಿಸಿದ ಕದ್ರಿ ಲೇಪಾಕ್ಷಿ 18/12 ಎಂಬ ಹೆಸರಿನ ಶೇಂಗಾ ತಳಿಯಲ್ಲಿ ಹೆಚ್ಚಿನ ಎಣ್ಣೆ ಅಂಶವಿದೆ. ಈ ಬೆಳೆಯನ್ನು ಮಳೆಯಾಧಾರಿತ ಹಾಗೂ ಕೊಳವೆ ಬಾವಿಯ ನೀರಾವರಿ ಸೌಕರ್ಯ ಹೊಂದಿರುವವರು ಬೆಳೆಯ ಬಹುದಾಗಿದ್ದು, ಬೆಲೆಯು ದುಪ್ಪಟ್ಟಾಗಿದೆ. ಇವರು ಎಲ್ಲಾ ರೈತರಂತೆ ಕೆಲ ಗೊಬ್ಬರಗಳ ಜೊತೆಗೆ ಕೊಟ್ಟಿಗೆ ಗೊಬ್ಬರನ್ನು ಹೆಚ್ಚಾಗಿ ಬೆಳೆಗೆ ನೀಡುವ ಮೂಲಕ ಉತ್ತಮ ಇಳುವರಿಯ ಫಸಲನ್ನು ಕಂಡುಕೊಂಡಿದ್ದಾರೆ.

      ಈ ರೈತನನ್ನು ಕೊರೊನಾ ಸಂಕಷ್ಟದ ನಡುವೆಯು ಶೇಂಗಾ ಕೃಷಿಯು ಕೈ ಹಿಡಿದಿದೆ. ಶೇಂಗಾ ಗಿಡವೊಂದಕ್ಕೆ 100 ರಿಂದ 120 ಕಾಯಿ ಕಟ್ಟುವ ಮೂಲಕ ಹೆಚ್ಚಿನ ಇಳುವರಿಯ ಶೇಂಗಾ ಫಸಲು ಬಂದಿತ್ತು. ಈ ಹಿಂದೆ ಶೇಂಗಾ ಬೆಳೆಯನ್ನು ವೀಕ್ಷಿಸಲು ಕೊರಟಗೆರೆ, ಶಿರಾ, ಮಧುಗಿರಿಯ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ರಂಗನಾಥ್ ಜಮೀನಿಗೆ ಭೇಟಿ ನೀಡಿದ್ದರು.

       ಉಪವಿಭಾಗದ ರೈತರಿಗಾಗಿಯೆ ಕೃಷಿ ಇಲಾಖೆಯಿಂದ ಸುಮಾರು 30 ಕ್ವಿಂಟಾಲ್ ಶೇಂಗಾವನ್ನು ಖರೀದಿಸಿದ್ದುಂಟು. ತಾಲ್ಲೂಕಿಗೆ ಈ ಕದ್ರಿ 18/12 ತಳಿಯ ಶೇಂಗಾವನ್ನು ಪರಿಚಯಿಸಿದ ಯುವ ಪ್ರಗತಿಪರ ರೈತರ ರಂಗನಾಥ್ ಯಾದವ್ ಸಹೋದರರು ತಾವು ಬೆಳೆದ ಹೆಚ್ಚಿನ ಬಿತ್ತನೆ ಬೀಜಗಳನ್ನು ರೈತರಿಗೆ ನೇರವಾಗಿ ಮಾರಾಟ ಮಾಡಲಿದ್ದಾರೆ.

      ರೈತ ತನ್ನ 4 ಎಕರೆ ಜಮೀನಿನಲ್ಲಿ ಈಗಾಗಲೇ ಕದ್ರಿ ತಳಿ ಶೇಂಗಾ ಬೆಳೆಯನ್ನು ಬೆಳೆದು, ಮಾರಾಟದಿಂದ ಬಂದಂತಹ ಲಾಭಾಂಶದಲ್ಲಿ ಇತ್ತೀಚೆಗೆ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ವಿವಿಧ ತರಕಾರಿ ಬೆಳೆಗಳಾದ ಕೊತ್ತಂಬರಿ, ಮೆಣಸಿನಕಾಯಿ, ಬದನೆ, ಆಲೂಗೆಡ್ಡೆ, ಹುರುಳಿ ಕಾಯಿ (ಬೀನ್ಸ್) ಬೆಳೆದು ಉತ್ತಮವಾದ ಇಳುವರಿ ಪಡೆದಿದ್ದಾರೆ. ಮಧುಗಿರಿ, ತುಮಕೂರು, ಶಿರಾ, ಕೊರಟಗೆರೆಗೆ ತಮ್ಮ ಸ್ವಂತ ವಾಹನದಲ್ಲಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ.

      ಕೆಲ ತಿಂಗಳುಗಳ ಹಿಂದೆ ಐಡಿಹಳ್ಳಿ ಹೋಬಳಿಯ ಚೀಲನಹಳ್ಳಿ ಯ ರೈತ ರಂಗನಾಥ್ ಯಾದವ್ ಕುಟುಂಬ ಬೆಳೆದಿರುವ ಆಂಧ್ರದ ಕದ್ರಿಲೇಪಾಕ್ಷಿ 18/12 ಹೆಸರಿನ ಶೇಂಗಾ ಬೆಳೆಯನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು.

      ಕಳೆದ ಬಾರಿ ಆಂಧ್ರದ ಕದ್ರಿ ಲೇಪಾಕ್ಷಿ ತಳಿಯ ಶೇಂಗಾವನ್ನು ತಂದು ಬೆಳೆಯಲಾಯಿತು. ಅಚ್ಚರಿಯೆಂಬಂತೆ 110 ದಿನಗಳಲ್ಲಿಯೇ ಹೆಚ್ಚಿನ ಇಳುವರಿ ಬಂದಿದೆ. ಉಳಿದ ಶೇಂಗಾವನ್ನು ಸ್ಥಳೀಯ ರೈತರಿಗೂ ಬಿತ್ತನೆಗಾಗಿ ನೀಡಿದ್ದೇನೆ. ನೇರವಾಗಿ ಮಾರಾಟ ಮಾಡಲು ನಾನು ಮುಂದಾಗಿದ್ದೇನೆ. ನಮ್ಮ ರೈತರು ಇಂತಹ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ.

-ರಂಗನಾಥ್, ರೈತ, ಚೀಲನಹಳ್ಳಿ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link