ಮಧುಗಿರಿ :
ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ವರ್ಗದಲ್ಲಿ ನೀಡಲಾಗುವ ಪುರಸ್ಕಾರಕ್ಕೆ ಮಧುಗಿರಿಯ ಪುರಸಭೆಯು ರಾಜ್ಯದಲ್ಲಿಯೇ ಎರಡನೇ ಸ್ಥಾನ ಗಳಿಸುವುದರ ಜತೆಗೆ 75 ಸಾವಿರ ನಗದು ಬಹುಮಾನ ಪಡೆದು ಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪುರಸಭಾಧ್ಯಕ್ಷ ತಿಮ್ಮರಾಜು ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ಪೌರಡಳಿತ ಇಲಾಖೆ ಹಾಗೂ ಸಿಮ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 2016 ರ ಎಸ್‍ಡಬ್ಲ್ಯುಎಂ ನಿಯಮಗಳನ್ನು ಪರಿಣಾಮಕಾರಿಯಾಗಿ ಪುರಸಭೆಯಲ್ಲಿ ಅನುಷ್ಠಾನ ಮಾಡಿದ್ದರಿಂದ ಪ್ರಶಸ್ತಿ ಲಭ್ಯವಾಗಿದೆ. 2019-20ನೆ ಸಾಲಿನಲ್ಲಿ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಲೋಹಿತ್, ಅಮರನಾರಾಯಣ್, ಸೌಮ್ಯ ರವರುಗಳ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರ ಫಲವಾಗಿ ಇಲಾಖೆಯ ವತಿಯಿಂದ ಈ ಪುರಸ್ಕಾರ ದೊರೆತಿದೆ ಎಂದರು.
2016ರ ನಿಯಾಮವಳಿಗಳ ಅನುಷ್ಠಾನಕ್ಕೆ ಸಹಕಾರ ನೀಡಿದ ಪೌರ ಕಾರ್ಮಿಕರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ನಮ್ಮ ಪುರಸಭೆಗೆ ಪ್ರಶಸ್ತಿಗಳು ದೊರಕುವಂತಾಗಲಿ ಹಾಗೂ ಇಲಾಖೆಯ ವತಿಯಿಂದ ಕೈಗೊಳ್ಳುವ ಪ್ರತಿಯೊಂದು ನಿಯಮಗಳ ಅನುಷ್ಠಾನಕ್ಕೆ ಪುರಸಭಾ ಸದಸ್ಯರ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯಾಧಿಕಾರಿ ಎ.ನಜ್ಮಾ ಮಾತನಾಡಿ, ಸಿಮ್ಯಾಕ್ ಸಂಸ್ಥೆ ಪ್ರತಿವರ್ಷ ನೀಡುವ ಕೇಂದ್ರೀಕೃತ ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಯ ದಾಖಲೀಕರಣದಲ್ಲಿ ನಮ್ಮ ಪುರಸಭೆ 2019 -20 ನೆ ಸಾಲಿನಲ್ಲಿ ಎರಡನೆ ಸ್ಥಾನ ಗಳಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಮಧುಗಿರಿ ಪುರಸಭೆಯು ಮೊದಲನೇ ಸ್ಥಾನ ಗಳಿಸುವ ಗುರಿಯನ್ನು ಹೊಂದಿದೆ. ಪೌರಡಳಿತ ಇಲಾಖೆಯು ಕಾಲ ಕಾಲಕ್ಕೆ ಸೂಚಿಸುವ ನಿಯಮಗಳ ಪಾಲನೆ ಮತ್ತು ಅನುಷ್ಠಾನಕ್ಕೆ ಎಲ್ಲ್ಲರೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಚಂದ್ರಶೇಖರ್, ನರಸಿಂಹಮೂರ್ತಿ, ಅಧಿಕಾರಿಗಳಾದ ಬಾಲಾಜಿ, ಫಿರೋಜ್, ನವೀನ್, ಮುಖಂಡರಾದ ಎಸ್‍ಬಿಟಿ ರಾಮು ಮತ್ತಿತರರು ಇದ್ದರು.
ಗುರುಭವನದಲ್ಲಿರುವ ಅಂಗಡಿ ಮಳಿಗೆಗಳನ್ನು ನಿರ್ವಹಣೆ ಮಾಡುವವರಿಗೆ ಈಗಾಗಲೆ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿ, ಕಾಲಾವಕಾಶ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅ.21ರಂದು ಅಧಿಕಾರಿಗಳೊಂದಿಗೆ ಸೇರಿ ಅಂಗಡಿ ಮಳಿಗೆಗಳಿಗೆ ಬೀಗ ಹಾಕಲಾಗುವುದು.
_ತಿಮ್ಮರಾಜು, ಪುರಸಭಾಧ್ಯಕ್ಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
