
ಪ್ರಜಾಪ್ರಗತಿ.ಕಾಂ
ಮಧುಗಿರಿ: ಬದಲಾಗುತ್ತಿರುವ ಯಾಂತ್ರೀಕೃತ ಬದುಕಿನಲ್ಲಿ ಮನುಷ್ಯ ಸೋಮಾರಿಯಾಗದೆ ದೇಹ ದಂಡಿಸಬೇಕು. ಮನುಷ್ಯನ ನೆಮ್ಮದಿಯ ಬದುಕಿಗೆ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದು ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಅವರು ಶ್ರೀ ಸಿದ್ದಗಂಗಾ ಹಾಸ್ಪಿಟಲ್ ಡಯಾಲಿಸಿಸ್ ಸೆಂಟರ್ ಮಧುಗಿರಿ ಹಾಗೂ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪಾವಗಡ ಇವರು ಹಮ್ಮಿಕೊಂಡಿದ್ದ ಮಧುಗಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಬದುಕಲು ಶುದ್ದವಾದ ಗಾಳಿ, ನೀರು, ಆಹಾರ ಜೊತೆಗೆ ವಸತಿ ಬಹುಮುಖ್ಯ. ಇದರ ಜೊತೆಗೆ ೨೧ನೆ ಶತಮಾನದ ಆಧುನಿಕ ವಿಜ್ಞಾನ, ತಂತ್ರಜ್ಞಾನದ ಜಗತ್ತಿನಲ್ಲಿ ನೆಮ್ಮದಿಯಾಗಿ ಜೀವಿಸಲು ಶಿಕ್ಷಣ ಮತ್ತು ಆರೋಗ್ಯ ಸೇವೆಯೂ ಅವಶ್ಯಕವಾಗಿದೆ.
ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿ ಯವರ ಅಪ್ಪಣೆ ಪಡೆದು ಶೀಘ್ರವಾಗಿ ಮಧುಗಿರಿಯಲ್ಲಿ ಆಧುನಿಕ ಮತ್ತು ಉತ್ತಮ ಗುಣಮಟ್ಟದ ಹೃದ್ರೋಗ ವಿಭಾಗವನ್ನು ಆರಂಭಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಶ್ರೀ ಜಪಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ರೋಗಿಗಳಿಗೆ ವೈದ್ಯರೆ ದೇವರು, ಸೇವೆಯೆ ದೊಡ್ಡ ಧರ್ಮ. ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಹೃದಯ ಸಂಬAಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ತಿಂಗಳಿಗೊಮ್ಮೆ ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಹೃದ್ರೋಗ ತಪಾಸಣಾ ಶಿಬಿರ ಏರ್ಪಡಿಸಬೇಕು. ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಈ ಭಾಗದಲ್ಲಿ ಆಸ್ಪತ್ರೆ ತೆರೆದಿದ್ದು ಸದ್ಬಳಕೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಸಿಇಒ ಡಾ.ಎಸ್.ಸಚ್ಚಿದಾನಂದ್ ಮಾತನಾಡಿ, ತಾಲೂಕು ಮಟ್ಟದಲ್ಲಿ ಡಯಾಲಿಸಿಸ್ ಕೇಂದ್ರ ತೆರೆದಿರುವುದು ಶ್ಲಾಘನೀಯವಾಗಿದೆ. ಜಪಾನಂದ ಶ್ರೀಗಳು ಕಣ್ಣಿನ ಆಸ್ಪತ್ರೆ ಜೊತೆಗೆ ಕುಷ್ಠ ರೋಗಿಗಳು ಮತ್ತು ಕ್ಷಯರೋಗಿಗಳಿಗೂ ಆರೋಗ್ಯ ಸೇವೆ ನೀಡಿದ್ದಾರೆ. ಶೀಘ್ರವಾಗಿ ಮಧುಗಿರಿಯಲ್ಲಿ ಹೃದ್ರೋಗ ಚಿಕಿತ್ಸೆಗೆ ಓಪಿಡಿ ಸೌಲಭ್ಯ ಆರಂಭಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಆನಂದ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸಿದ್ದಗಂಗಾ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಡಾ.ಶಾಲಿನಿ, ಎಚ್.ಬಿ.ಶಿವಕುಮಾರ್, ಎಚ್.ವಿ.ವೀರೇಶ್, ಎಚ್.ಬಿ.ರುದ್ರೇಶ್, ಎನ್.ಎಂ.ಶಿವಕುಮಾರ್, ಅನುರಾಧ ಉಮಾಶಂಕರ್, ಅಕ್ಷಯ್, ಡಾ.ಎಂ.ಎನ್.ಸAಜೀವಕುಮಾರ್, ಎಚ್.ವಿ.ನಟರಾಜ್, ಡಾ.ಅರುಣ್, ಡಾ.ಮಹಾದೇವ್, ಎಂ.ಜಿ.ಎA ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಶAಕರ್ ನಾರಾಯಣ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಸಂಯೋಜಕರಾದ ಶಶಿಕುಮಾರ್ ಎಚ್.ಆರ್, ಟಿ.ಪ್ರಸನ್ನಕುಮಾರ್, ನರೇಶ್, ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಮತ್ತಿತರರು ಇದ್ದರು.
ಸಿದ್ದಗಂಗಾ ಶ್ರೀಗಳ ಸಹಕಾರದಿಂದ ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಪ್ರಾಸ್ತಾವಿಕವಾಗಿ ಶ್ರೀ ಜಪಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ಜನತೆಗೆ ಅನುಕೂಲವಾಗಲೆಂದು ಕಣ್ಣಿನ ಆಸ್ಪತ್ರೆ ಆರಂಭಿಸಿದೆವು ಎಂದರು. ಸಿದ್ದಗಂಗಾ ಶ್ರೀಗಳ ಸಹಕಾರದಿಂದ ಡಯಾಲಿಸಿಸ್ ಕೇಂದ್ರವನ್ನು ತೆರೆದು ಒಂದು ವರ್ಷವಾಗಿದೆ. ಈವರೆಗೆ ೧೫೦೦ ರೋಗಿಗಳಿಗೆ ಡಯಾಲಿಸಿಸ್ ನಡೆಸಲಾಗಿದೆ. ೨೦೦೦ ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಚಿಕಿತ್ಸೆ ನೀಡಿದ್ದು, ೧೦೦ ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತç ಚಿಕಿತ್ಸೆ ಮಾಡಲಾಗಿದೆ. ಈ ಸೇವಾ ಯಜ್ಞಕ್ಕೆ ಎಚ್.ಸಿ.ಬಸವರಾಜು ಮತ್ತು ವೀರಭದ್ರಪ್ಪ ನವರ ಕುಟುಂಬದ ಕೊಡುಗೆ ಮಹತ್ತರವಾದುದು ಎಂದು ಸ್ಮರಿಸಿದರು.
ಕೇವಲ ಸರ್ಕಾರದಿಂದ ಎಲ್ಲಾ ಸೇವೆಗಳನ್ನು ಪೂರೈಸಲು ಸಾಧ್ಯವಿಲ್ಲ. ಸಮಾಜವೂ ಸರ್ಕಾರದ ಜೊತೆ ಕೈಜೋಡಿಸಬೇಕು.
ಸಮಾಜ ಸೇವೆಯೆ ದೈವ ಸೇವೆ ಎಂದು ಎಚ್.ಸಿ.ಬಸವರಾಜು ಮತ್ತು ಎಚ್.ಸಿ.ವೀರಭದ್ರಪ್ಪ ಕುಟುಂಬದವರು ದೂರದೃಷ್ಟಿಯಿಂದ ಈ ಆರೋಗ್ಯ ಸೇವಾಸೌಧ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಬಡವರಿಗೆ, ನೊಂದವರಿಗೆ ಸಹಾಯಹಸ್ತ
ಚಾಚುತ್ತಿರುವ ಜಪಾನಂದ ಶ್ರೀಗಳ ಸಮಾಜ ಸೇವೆ ಶ್ಲಾಘನೀಯವಾದುದು. ಜೀವನ ಶೈಲಿ ಬದಲಾದಂತೆ ಮನುಷ್ಯ ಬದಲಾವಣೆಯಾಗಿ ಆರೋಗ್ಯದ ಬಗ್ಗೆ ಜಾಗೃತರಾಗಬೇಕು.
-ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕಿರಿಯ ಸ್ವಾಮಿಗಳು, ಶ್ರೀ ಸಿದ್ದಗಂಗಾ ಮಠ.








