ಕೇಂದ್ರ-ರಾಜ್ಯ ಸರ್ಕಾರ ದಲ್ಲಾಳಿಗಳ ಸರ್ಕಾರ : ಪರಂ ಆರೋಪ

 ಮಧುಗಿರಿ : 

      ರೈತ ವಿರೋಧಿಯಾದ ಮೋದಿಯವರು ಕಾರ್ಪೋರೇಟ್ ಉದ್ಯಮಿಗಳಿಗೆ ನೆರವಾಗುವಂತ ಕಾನೂನನ್ನು ಜಾರಿಗೊಳಿಸಲು ಮುಂದಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲ್ಲಾಳಿಗಳ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

      ಪಟ್ಟಣದ ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್ ನಿವಾಸಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಅಂತಾರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಅನ್ನದಾತನ ಶ್ರಮವನ್ನು ಮರೆಯಲಾಗದೆಂದು ಸ್ಮರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

      ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದಲ್ಲಿ ನಾವು ರೈತರ ಸಾಲ ಮನ್ನಾ ಮಾಡಿದ್ದೆವು. ಈ ಬಗ್ಗೆ ಯಡಿಯೂರಪ್ಪ ಎಲ್ಲೂ ತುಟಿ ಬಿಚ್ಚಿಲ್ಲ. ದೆಹಲಿಯಲ್ಲಿ ಕಳೆದ 3 ವಾರದಿಂದ ರೈತರು ಮುಷ್ಕರ ಮಾಡುತ್ತಿದ್ದರೂ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ರೈತ ಪರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರವು ಸದ್ಯ 6 ತಿಂಗಳಿಂದಲೂ ಯಾವುದೇ ರೀತಿಯ ಪಿಂಚಣಿಯನ್ನು ಸಹ ನೀಡಿಲ್ಲ.

      ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಶೇ.60ರಷ್ಟು ಕಾರ್ಮಿಕರು ಕೃಷಿ ವಲಯವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದು, ಅಂತಹ ಕಾರ್ಮಿಕರೂ ಸಹ ಇಂದು ಅತಂತ್ರರಾಗಿದ್ದಾರೆ. ರಾಜ್ಯದಲ್ಲಿ 3 ಬಾರಿಯ ನೆರೆ, ಬರದಿಂದ ಜನತೆ ಹೈರಾಣಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ಮೋದಿ ಸಹ ರಾಜ್ಯದ ನೆರವಿಗೆ ಬಂದಿಲ್ಲ.

      ರಾಜ್ಯ ಸರ್ಕಾರ ಕೂಡ ಜನರನ್ನು ಕೈ ಬಿಟ್ಟಿದೆ. ಈ ಬಿಜೆಪಿ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ವಿಫಲವಾಗಿದ್ದು, ಜನತೆಯ ದೃಷ್ಟಿಯಲ್ಲಿ ಕಳಂಕಿತರಾಗಿದ್ದಾರೆ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಬಂದ ನೆರೆಗೆ ಸರ್ಕಾರ ಸ್ಪಂದಿಸಿದ ರೀತಿಗೆ ಹಲವಾರು ಕೈಗಾರಿಕೋದ್ಯಮಿಗಳು, ಮಠಾಧೀಶರೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಜೆಟ್ ಪತ್ರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೂರು ಬಾರಿ ಪ್ರವಾಹದಿಂದ 56 ಸಾವಿರ ಕೋಟಿ ರೂ. ಆದ ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕೂಡ ರಾಜ್ಯಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದೂ ದೂರಿದರು.

      ಈ ಬಾರಿಯ ಗ್ರಾ.ಪಂ.ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಪ್ರವಾಹ ಪೀಡಿತರಾಗಿದ್ದರೂ ಕೂಡ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ಬದಲು ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರರನ್ನೂ ಅಭಿನಂದಿಸಿದರು.

      ಮಧುಗಿರಿ ಜಿಲ್ಲೆಯಾಗಬೇಕೆಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಜಿ.ಪರಮೇಶ್ವರ್, ಸ್ವಾತಂತ್ರ್ಯ ಪೂರ್ವದಲ್ಲೇ ಮಧುಗಿರಿ ಉಪವಿಭಾಗ ಕೇಂದ್ರವಾಗಿತ್ತು. ನಾವಿದ್ದಾಗಲೇ ಶೈಕ್ಷಣಿಕ ಜಿಲ್ಲೆಯಾಗಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳ ಅಗತ್ಯತೆಯನ್ನು ಪೂರೈಸಿದ್ದೇವೆ. ತುಮಕೂರು ಜಿಲ್ಲೆಯಲ್ಲಿ 11 ವಿಧಾನ ಸಭಾ ಕ್ಷೇತ್ರಗಳು, 10 ತಾಲ್ಲೂಕುಗಳು ಇವೆ. ಬೆಳಗಾಂ ನಂತರ ತುಮಕೂರು ಜಿಲ್ಲೆ ಅತಿ ದೊಡ್ಡ ಜಿಲ್ಲೆಯಾಗಿದೆ. ಪಾವಗಡದಿಂದ ಜಿಲ್ಲಾ ಕೇಂದ್ರ ತಲುಪಲು ಬಹು ದೂರವಾಗಿರುವುದರಿಂದ ಬರ ಪೀಡಿತ ಮತ್ತು ರಾಯಲ್‍ಸೀಮೆಗೆ ಸೇರಿರುವುದರಿಂದ ಹಾಗೂ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಮಧುಗಿರಿ ಜಿಲ್ಲೆಯಾಗಲು ಸೂಕ್ತ ಕ್ಷೇತ್ರವಾಗಿದೆ. ಎಆರ್‍ಟಿಓ, ಸಾರಿಗೆ ಡಿಪೋ ಕೂಡ ಕ್ಷೇತ್ರದಲ್ಲಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಕೈಗಾರಿಕಾ ವಲಯ ಕೂಡ ಮಂಜೂರಾಗಿದೆ. ಆಡಳಿತ ಸುಧಾರಣೆಗಾಗಿ ಈಗಿನ ಬಿಜೆಪಿ ಸರ್ಕಾರಕ್ಕೆ ಅಂತಹ ಯಾವುದೇ ತೊಡಕಿಲ್ಲ. ಮಧುಗಿರಿಯನ್ನು ಜಿಲ್ಲೆ ಮಾಡಬಹುದಾಗಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ ಎಂದರು.

      ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಪಟ್ಟಣದ ಶ್ರೀ ದಂಡಿನ ಮಾರಮ್ಮ ದೇಗುಲದ ಪ್ರಧಾನ ಅರ್ಚಕ ನಾಗಲಿಂಗಾಚಾರ್, ಮಾಜಿ ಪುರಸಭಾ ಉಪಾಧ್ಯಕ್ಷ ಎಂ.ಪಿ.ಗಣೇಶ್ ಮನೆಗಳಿಗೆ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣಶೆಟ್ಟರ ಮನೆಗೂ ಭೇಟಿ ನೀಡಿದ್ದರು.

      ಈ ಸಂದರ್ಭದಲ್ಲಿ ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ಸದಸ್ಯ ಚಂದ್ರಶೇಖರ ಬಾಬು, ಗಂಗರಾಜು, ಎಂ.ಎಸ್.ಚಂದ್ರಶೇಖರ್, ಮಾಜಿ ಪಿಕಾರ್ಡ್ ಸದಸ್ಯ ಕೂರ್ಲಪ್ಪ, ಮುಖಂಡ ಶ್ರೀಧರ್, ನಾರಾಯಣ್, ಗುತ್ತಿಗೆದಾರ ವೆಂಕಟಕೃಷ್ಣಾರೆಡ್ಡಿ, ಕಾರಮರಡಿ ಮಹೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಇದ್ದರು.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link