ಮಧುಗಿರಿ :
ತಾಲ್ಲೂಕಿನಲ್ಲಿ ನಡೆದ 2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 39 ಗ್ರಾಪಂಗಳ ಪೈಕಿ, 31 ಕಾಂಗ್ರೆಸ್, 1 ಬಿಜೆಪಿ, 3 ಜೆಡಿಎಸ್ ಬೆಂಬಲಿತ ರಾಜಕೀಯ ಪಕ್ಷಗಳ ವಶವಾಗುವಾಗುವ ಸಾಧ್ಯತೆಯಿದೆ. ಯಾವುದೇ ರಾಜಕೀಯ ಪಕ್ಷಗಳ ಬೆಂಬಲಿತರು ಬಹುಮತ ಪಡೆಯದ ಕಾರಣ 4 ಗ್ರಾಪಂಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ವಾತಾವರಣ ಕಂಡು ಬಂದಿದೆ.
ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಧುಗಿರಿ ತಾಲ್ಲೂಕಿಗೆ ಸೇರಿದ ಪುರವರ ಹೋಬಳಿಯ 6 ಕ್ಷೇತ್ರಗಳನ್ನು ಹೊರತು ಪಡಿಸಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಮಿಡಿಗೇಶಿ, ದೊಡ್ಡೇರಿ, ಐಡಿಹಳ್ಳಿ, ಕಸಬಾ, ಕೊಡಿಗೇನಹಳ್ಳಿ ಹೋಬಳಿಗಳಿಂದ ಒಟ್ಟು 33 ಗ್ರಾಪಂಗಳಲ್ಲಿ ಕಾಂಗ್ರೆಸ್ 363 ಸ್ಥಾನಗಳು, ಜೆಡಿಎಸ್ 153 ಸ್ಥಾನಗಳು ಮತ್ತು ಬಿಜೆಪಿ 4 ಸ್ಥಾನ, ಸ್ವತಂತ್ರ ಅಭ್ಯರ್ಥಿಗಳು 5 ಸ್ಥಾನಗಳನ್ನು ಗಳಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು 33 ಗ್ರಾ.ಪಂಗಳಲ್ಲಿ 27 ಗ್ರಾ.ಪಂಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸೂಚನೆಗಳು ಕಂಡು ಬರುತ್ತಿವೆ.
ಈ ಬಾರಿಯ ಗ್ರಾ.ಪಂ ಸದಸ್ಯ ಸ್ಥಾನದ ಚುನಾವಣಾ ಫಲಿತಾಂಶದಲ್ಲಿ ಹಲವು ಅಚ್ಚರಿ ಫಲಿತಾಂಶಗಳು ಹೊರ ಬಿದ್ದಿರುವುದು ವಿಶೇಷವಾಗಿದೆ. ವಿಶೇಷಚೇತನ, ರೈತ ಮಹಿಳೆ, ತಾಯಿ-ಅಕ್ಕನ ಗೆಲುವು, ಸಹೋದರರ ಗೆಲುವು, ಏಕ ಮತದಿಂದ ಗೆಲುವು, ಲಾಟರಿ ಮೂಲಕ ಆಯ್ಕೆ, ಮಾಜಿ ಅಧ್ಯಕ್ಷರುಗಳ ಸೋಲು, ಮಾಜಿ ಉಪಾಧ್ಯಕ್ಷರುಗಳ ಗೆಲುವು ಹಾಗೂ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಅಭ್ಯರ್ಥಿಗಳನ್ನು ಮತದಾರ ತಿರಸ್ಕರಿಸಿರುವುದು ಕಂಡು ಬಂದಿದೆ.
ತಾಲ್ಲೂಕಿನ ಕವಣದಾಲ ಗ್ರಾಪಂ ವ್ಯಾಪ್ತಿಯ ಪೂಜಾರಹಳ್ಳಿಯ ಪರಿಶಿಷ್ಟ ಜಾತಿ ಅಭ್ಯರ್ಥಿ ನಾಗರಾಜು ಹುಟ್ಟಿನಿಂದಲೇ ಕಾಲುಗಳನ್ನು ಕಳೆದುಕೊಂಡಿದ್ದರೂ, ವಿದ್ಯಾವಂತನಾಗಿದ್ದ ಈ ವ್ಯಕ್ತಿಯನ್ನು ಕಾಂಚಾಣದ ಕಲರವದ ಮಧ್ಯೆಯೂ ಗ್ರಾಮದ ಯುವಕರು, ಮತದಾರರು ಆಯ್ಕೆ ಮಾಡಿದ್ದಾರೆ. ತಾಲ್ಲೂಕಿನ ಆಪನಹಳ್ಳಿ ಗ್ರಾಮದ ರೈತ ಮಹಿಳೆ ಸುಶೀಲಮ್ಮ ಉಮೇಶ್ ಇಂದಿಗೂ ಅಡಕೆ ಸುಲಿಯುವ ಕಾರ್ಯವನ್ನು ಮಾಡುತ್ತಿದ್ದು, ಇವರನ್ನೂ ಮತದಾರ ಕೈ ಹಿಡಿದಿದ್ದಾರೆ.
ತಾಲ್ಲೂಕು ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿಯ ಡಿ.ವಿ.ಹಳ್ಳಿ ಗ್ರಾಮದಿಂದ ರಾಮು ಅವರ ತಾಯಿ ಈರಮ್ಮ, ಅಕ್ಕ ಕಲಾವತಿ ದಂಡಿನದಿಬ್ಬ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ರಂಗಾಪುರ ಗ್ರಾಪಂ ಜಯನಗರ ಹೊಸಗುಂಡ್ಲು ಕ್ಷೇತ್ರದ ಜ್ಯೋತಿ ಮತ್ತು ಸುನಿತಾ ತಲಾ 141 ಮತಗಳನ್ನು ಪಡೆದು ಜ್ಯೋತಿ ಲಾಟರಿ ಮೂಲಕ ಆಯ್ಕೆಯಾದರು. ಮಿಡಿಗೇಶಿ ಹೋಬಳಿಯ ಹನುಮಂತಪುರ ಕ್ಷೇತ್ರದ ಸಿದ್ದಪ್ಪ ಮತ್ತು ಭಾಗ್ಯಮ್ಮ ತಲಾ 373 ಮತಗಳನ್ನು ಪಡೆದಿದ್ದರು. ಸಿದ್ದಪ್ಪ ಲಾಟರಿ ಮೂಲಕ ಆಯ್ಕೆಯಾದರು.
ದೊಡ್ಡಮಾಲೂರು ಗ್ರಾ.ಪಂ. ಕ್ಷೇತ್ರದ ಲಕ್ಷ್ಮಮ್ಮ ಮತ್ತು ಸಂಜೀವಮ್ಮ ಕಲಾ 351 ಮತಗಳನ್ನು ಪಡೆದಿದ್ದರು. ಲಕ್ಷ್ಮಮ್ಮ ಲಾಟರಿ ಮೂಲಕ ಆಯ್ಕೆಯಾದರು. ಬಿದರಕೆರೆ ಕ್ಷೇತ್ರದಿಂದ ಗೌರಮ್ಮ ಮತ್ತು ಚಿಕ್ಕದಾಳವಟ್ಟ ಕ್ಷೇತ್ರ ಓಬಳಾಪುರ ಕ್ಷೇತ್ರದಿಂದ ನರಸಪ್ಪ ಎಂಬುವವರು ತಮ್ಮ ಪ್ರತಿಸ್ಪರ್ಧಿ ಎದುರು ಏಕ ಮತದಿಂದ ಆಯ್ಕೆಯಾಗಿದ್ದರು.
ಕಳೆದ ಬಾರಿ ನಡೆದ ಗರಣಿ ಗ್ರಾ.ಪಂ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷ ಗಾದಿಗಾಗಿ ಪ್ರಥಮ ಬಾರಿಗೆ ಖಾಸಗಿ ಭದ್ರತೆಯನ್ನು ರಕ್ಷಣೆಗಾಗಿ ಕರೆಸಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದ ಮಾಜಿ ಅಧ್ಯಕ್ಷ ಎಲ್‍ಐಸಿ ಗೋವಿಂದರಾಜುಗೆ ಗ್ರಾಮಸ್ಥರು ಈ ಬಾರಿ ಸೋಲಿನ ರುಚಿ ತೋರಿಸಿದ್ದು, ಇಲ್ಲಿ ಗರಣಿ ಗಿರೀಶ್ ಮತ್ತು ತಂಡದವರು ಜಯಭೇರಿ ಬಾರಿಸಿದ್ದಾರೆ.
ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷೆ ಸ್ವರ್ಣಲತಾ ಪ್ರಸನ್ನಕುಮಾರ್, ಮಿಡಿಗೇಶಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್.ರಾಜು ಮತ್ತು ನೇರಳೆಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ದಿನೇಶ್ (ಹಾಲಿ ಕೆಪಿಸಿಸಿ ಕಾರ್ಯದರ್ಶಿ), ಚಿನಕವಜ್ರ ಗ್ರಾ.ಪಂ. ಮಾಜಿ ಅಧ್ಯಕ್ಷೆ ನಾಗಮ್ಮ, ಹೊಸಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವರಾಜು ಸೋತ ಪ್ರಮುಖರಾಗಿದ್ದಾರೆ.
ದಬ್ಬೇಗಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಸಿದ್ದೇಶ್ ಪುನರ್ ಆಯ್ಕೆಯಾಗಿ ಸತತವಾಗಿ 3 ಬಾರಿ ಸದಸ್ಯರಾಗಿದ್ದಾರೆ. ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಲೋಕೇಶ್‍ರವರ ಪತ್ನಿ ಕೆ.ಹೇಮಲತ, ತಾಯಗೊಂಡನಹಳ್ಳಿ ಕ್ಷೇತ್ರದಿಂದ ಡೈರಿ ಶಿವಣ್ಣ, ಕಡಗತ್ತೂರು ಗ್ರಾಪಂ ಕ್ಷೇತ್ರದಿಂದ ಜಿ.ಪಂ ಮಾಜಿ ಸದಸ್ಯೆ ಮಂಜುಳರವರ ಪತಿ ಕೆ.ಎನ್.ರಾಜಶೇಖರ ರೆಡ್ಡಿ, ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಜಡೆಗೊಂಡನಹಳ್ಳಿ ಕ್ಷೇತ್ರದಿಂದ ಕಸಬಾ ವಿ.ಎಸ್.ಎಸ್.ಎನ್ ನಿರ್ದೇಶಕ ಕೆ.ಚೌಡಪ್ಪ, ಹೊಸಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಅವರಗಲ್ಲು ಗೋವಿಂದರಾಜು, ಕೊಟಗಾರ್ಲಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಗಂಗಾಧರ, ಹಂದ್ರಾಳು ಕ್ಷೇತ್ರದಿಂದ ಅರೆಕಾಲಿಕ ಉಪನ್ಯಾಸಕರಾದ ಸತ್ಯನಾರಾಯಣ ಮತ್ತು ಐಡಿಹಳ್ಳಿ ಹೋಬಳಿಯ ಮೀಸಲು ಕ್ಷೇತ್ರದಿಂದ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಚಿಕ್ಕಮಾಲೂರು ಗ್ರಾಮ ಪಂಚಾಯಿತಿಯಲ್ಲಿ ಸಹೋದರರಿಬ್ಬರು ಗೆಲುವು ಸಾಧಿಸಿದ್ದು ಅಶ್ವಥಪ್ಪ ಮತ್ತು ರಾಮಯ್ಯ ಆಯ್ಕೆಯಾಗಿದ್ದಾರೆ. ಬೇಡತ್ತೂರು ಗ್ರಾ.ಪಂನಲ್ಲಿ ಗುತ್ತಿಗೆದಾರ ಜನಾರ್ಧನರೆಡ್ಡಿ ತಂಡದ ಸದಸ್ಯರುಗಳು ಆಯ್ಕೆಯಾಗಿದ್ದು, ಅವರ ಪತ್ನಿ ಬಿದರಕೆರೆ ಕ್ಷೇತ್ರದಿಂದ ಸೋಲು ಕಂಡಿರುವುದು ವಿಪರ್ಯಾಸವಾಗಿದೆ.ಸಿದ್ದಾಪುರ ಗ್ರಾ.ಪಂ.ನ 1ನೇ ಬ್ಲಾಕ್‍ನಲ್ಲಿ ಸ್ಪರ್ಧಿಸಿದ್ದ ತಾ.ಪಂ.ಮಾಜಿ ಸದಸ್ಯ ಸಿ.ರಾಜು ಮತ್ತು ಶೈಲಿರವೀಶಾರಾಧ್ಯ ವಿರುದ್ಧ ಎಚ್.ರಾಜಗೋಪಾಲ್ ಜಯಸಾಧಿಸಿದ್ದಾರೆ. ಕೊಡಿಗೇನಹಳ್ಳಿ ಗ್ರಾ.ಪಂನಲ್ಲಿನ ಎರಡನೇ ವಾರ್ಡಿನ ವಹೀದಾಬಾನು ಮುಕ್ತಿಯಾರ್ ತಮ್ಮ ಪ್ರತಿ ಸ್ಪರ್ಧಿ ಶಾಂತರವರಿಗಿಂತ 650 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಮೈದನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜು ಸತತವಾಗಿ ನಾಲ್ಕು ಬಾರಿ ಹಾಗೂ ಡಿ.ವಿ.ಹಳ್ಳಿ ಗ್ರಾಪಂನಲ್ಲಿ ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಆರ್.ಟಿ.ಪ್ರಭು, ಹಾಗೂ ಸಿದ್ದಾಪುರ ಗ್ರಾಪಂನ ಹೇಮಲತಾ ಲೋಕೇಶ್, ಕೊಡಿಗೇನಹಳ್ಳಿಯ ಪ್ರೂಟ್‍ಕೃಷ್ಣ, ಏಜೆಂಟ್ ಕೃಷ್ಣ, ಗಂಗಾಧರ್, ದೇವರಾಜ್‍ರಾವ್, ನಸ್ರೀನ್‍ತಾಜ್, ವಹೀದಾಬಾನು, ಬಾಲಾಜಿ, ನಾಗಮಣಿ ಶ್ರೀನಿವಾಸ್, ಅರುಣಾ ಚಿನ್ನಪ್ಪರೆಡ್ಡಿ, ಮತ್ತೆ ಸದಸ್ಯರಾಗಿ ಪುನರ್ ಆಯ್ಕೆಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
