ಮಧುಗಿರಿ : ದಲಿತರಿಗೆ ರುದ್ರ ಭೂಮಿ : ಜಮೀನು ಖರೀದಿಗೆ ಪ್ರಸ್ತಾವನೆ

ಮಧುಗಿರಿ : 

      ಜನಸಂಖ್ಯೆಗೆ ಅನುಗುಣವಾಗಿ ಕೆಲವು ಗ್ರಾಮಗಳಿಗೆ ಜಮೀನು ಮಂಜೂರು ಆಗಿದೆ. ಉಳಿದಂತೆ ಖಾಸಗಿ ಜಮೀನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.

      ಅವರು ಪಟ್ಟಣದ ಸಾಮಥ್ರ್ಯಸೌಧದಲ್ಲಿ ಗುರುವಾರ ಆಯೋಜಿಸಿದ್ದ ಮಧುಗಿರಿ ಉಪವಿಭಾಗ ಮಟ್ಟದ ಪ.ಜಾತಿ ಮತ್ತು ಪ.ವರ್ಗದ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಉಪವಿಭಾಗದ ನಾಲ್ಕು ತಾಲ್ಲೂಕುಗಳಲ್ಲಿ ದಲಿತರಿಗೆ ರುದ್ರಭೂಮಿಯನ್ನು ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.

      ಜೀವಿಕ ಸಂಚಾಲಕಿ ಚಿಕ್ಕಮ್ಮ ಮಾತನಾಡಿ, ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಸಂಜೆಯಾದ ನಂತರ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹೋದರೆ ವೈದ್ಯರು ಸ್ಪಂದಿಸುವುದಿಲ್ಲ ಎಂದು ದೂರಿದಾಗ, ಟಿಎಚ್‍ಓ ಡಾ. ಇ. ರಮೇಶ್ ಬಾಬು, ಈಗಾಗಲೆ ಎಲ್ಲಾ ರೋಗಿಗಳನ್ನು ತಪಾಸಣೆ ಮಾಡುವಂತೆ ವೈದ್ಯರುಗಳಿಗೆ ಸೂಚನೆ ನೀಡಲಾಗಿದೆ ಎಂದರು.

      ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಇಂದಿನ ಸಭೆಯ ನಡಾವಳಿಗಳ ಅನುಪಾಲನಾ ವರದಿ ಗುಣ ಮಟ್ಟದಿಂದ ಕೂಡಿಲ್ಲ. ತಾಲ್ಲೂಕು ಮಟ್ಟದ ಕೆಲವು ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿ ಶಿಸ್ತು ಕಾಪಾಡುತ್ತಿಲ್ಲ ಎಂದು ದೂರಿದರು. ತಾಲ್ಲೂಕಿನ ಕೆಲ ದಲಿತರ ಜಮೀನುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಭೂ ಪರಿವರ್ತನೆ ಮಾಡಿ ಪ್ರ್ರಭಾವಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದು, ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

      ಪಾವಗಡದ ದಲಿತ ಮುಖಂಡ ನಾರಾಯಣಪ್ಪ ಮಾತನಾಡಿ, ಪುರಸಭೆ ಮಳಿಗೆಗಳಲ್ಲಿ ದಲಿತರಿಗೆ ಮೀಸಲಿಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಿ, ದಲಿತರಿಗೆ ನೀಡುವಂತೆ ಒತ್ತಾಯಿಸಿದಾಗ, ನಾಲ್ಕು ತಾಲ್ಲೂಕುಗಳ ಮುಖ್ಯಾಧಿಕಾರಿಗಳು ದಾಖಲೆ ಸಹಿತ ಸಂಪೂರ್ಣ ಮಾಹಿತಿ ನೀಡುವಂತೆ ಎ.ಸಿ ಸೂಚಿಸಿದರು.

      ಮಧುಗಿರಿ ತಾಲ್ಲೂಕಿನಲ್ಲಿ 916 ಜೀತದಾಳುಗಳು ಬಿಡುಗಡೆಯಾಗಿದ್ದು, ಅವರಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಜೀವಿಕ ತಾಲ್ಲೂಕು ಸಂಚಾಲಕ ಮಂಜುನಾಥ್ ಪ್ರಸ್ತಾಪಿಸಿದಾಗ, ತಾಪಂ ಇಓ ಡಿ. ದೊಡ್ಡಸಿದ್ದಯ್ಯ ಮಾತನಾಡಿ, 23.08 ಲಕ್ಷ ರೂ. ಇದ್ದು, ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.

      ದಲಿತ ಮುಖಂಡರಾದ ಸಿದ್ದಾಪುರ ರಂಗಶಾಮಣ್ಣ, ಎಂ.ವೈ ಶಿವಕುಮಾರ್, ಕಂಬದ ರಂಗಪ್ಪ, ಮಲೆರಂಗಪ್ಪ, ತೊಂಡೋಟಿ ರಾಮಾಂಜಿ, ನರಸಿಂಹಮೂರ್ತಿ, ಕೋಟೆಕಲ್ಲಪ್ಪ, ಡಿ.ಭರತ್, ಮಧುಗಿರಿ ತಹಸೀಲ್ಧಾರ್ ಡಾ.ಜಿ ವಿಶ್ವನಾಥ್. ಸಿರಾ ತಹಸೀಲ್ದಾರ್ ಮಮತ, ಪಾವಗಡ ತಹಸೀಲ್ದಾರ್ ನಾಗರಾಜು, ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ, ಸಿಪಿಐ ಎಂ.ಎಸ್ ಸರ್ದಾರ್, ಉಪವಿಭಾಗ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap