ಮಧುಗಿರಿ :
ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದ್ದು, ರಾಜಕೀಯ ವಿಚಾರಗಳನ್ನು ಟೀಕೆ ಮಾಡೋಕೆ, ಪ್ರಶಂಸೆ ಮಾಡೋಕೆ ಹಕ್ಕು ಇದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಹಿರಿಯ ಸಾಹಿತಿ ಪ್ರೊ ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಗೌರವಯುತ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಅವರು ಕೇಂದ್ರ ಸರಕಾರದ ಕಾರ್ಯ ವೈಖರಿಯನ್ನು ಟೀಕಿಸಿದ್ದನ್ನೇ ನೆಪವಾಗಿಟ್ಟುಕೊಂಡು ಮಂಡ್ಯ ನಗರದ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಖಂಡನೀಯ.
ಜನರು ಜೀವನ ನಡೆಸಲಿಕ್ಕೆ ಬೇಕಾಗುವ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾದ್ದು ಪ್ರತಿಯೊಬ್ಬ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಯಾರನ್ನೊ ಸಂತೃಪ್ತಿ ಪಡಿಸುವ ಸಲುವಾಗಿ ಇಂತಹ ಕ್ರಮಗಳನ್ನು ಕೈಗೊಂಡರೆ ಜನರು ಆಡಳಿತದ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸ ಮತ್ತು ಆರ್ಹತೆಯನ್ನು ಕಳೆದು ಕೊಂಡಂತಾಗುತ್ತದೆ. ಆದ್ದರಿಂದ ಇಂತಹ ಕ್ರಮಗಳಿಗೆ ಅಧಿಕಾರಿಗಳು ಅವಕಾಶ ನೀಡಬಾರದು. ರಾಜ್ಯ ಸರಕಾರ ಈ ಕೂಡಲೆ ಕ್ಷಮೆ ಯಾಚಿಸ ಬೇಕೆಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ. ನಮ್ಮ ತಾಲ್ಲೂಕಿನವರೆ ಆದ ದೊಡ್ಡರಂಗೇಗೌಡರು ಜನಪದ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಆಯ್ಕೆ ತಾಲ್ಲೂಕಿನ ಜನತೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದರು.
ಇತ್ತೀಚೆಗೆ ನಡೆದ ರಾಜಭವನ ಚಲೋ ಮೆರವಣಿಗೆಯಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಭಾಗವಹಿಸಿದ್ದು, ಆ ಸಂದರ್ಭದಲ್ಲಿ ನೂಕಾಟ, ತಳ್ಳಾಟ ಉಂಟಾಗಿದೆ. ಹೋಂಗಾರ್ಡ್ ಒಬ್ಬರಿಂದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರು ಪಡೆದು, ಸೌಮ್ಯ ರೆಡ್ಡಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವಿರಾರು ಜನ ಭಾಗವಹಿಸುವ ಮೆರವಣಿಗೆಗಳಲ್ಲಿ ಇದೆಲ್ಲಾ ಸರ್ವೆ ಸಾಮಾನ್ಯವಾಗಿದ್ದು, ಯಾರನ್ನೊ ಖುಷಿ ಪಡಿಸುವ ಸಲುವಾಗಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸರಕಾರ ಕೂಡಲೇ ಈ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ