ಮಧುಗಿರಿ :
ಜೀವಿಕ ಸಂಘಟನೆಯ ಹೆಸರಿನಲ್ಲಿ 916 ಜೀತದಾಳು ಫಲಾನುಭವಿಗಳಿಗೆ ಜೀವಿಕ ಸಂಸ್ಥೆಯ ಮಂಜುನಾಥ್, ಚಿಕ್ಕಮ್ಮ ಎನ್ನುವವರು ಮೋಸ ಮಾಡಿದ್ದಾರೆಂದು ಆರೋಪಿಸಿ ಮೂಲ ಜೀವಿಕ ಸಂಘಟನೆಯವರು ಮಧುಗಿರಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
2014ರಲ್ಲಿ ಜೀತ ವಿಮುಕ್ತರಾಗಿದ್ದವರಿಗೆ ಸರ್ಕಾರದಿಂದ 24 ಲಕ್ಷದ 40 ಸಾವಿರ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಇನ್ನೇನು ತಾಪಂ ವತಿಯಿಂದ ಜೀತ ವಿಮುಕ್ತರಿಗೆ ಹಣ ಹಂಚಿಕೆ ಮಾಡಬೇಕೆನ್ನುವಷ್ಟರಲ್ಲಿ ಪಟ್ಟಣದ ಜೀವಿಕ ಸಂಘಟನೆ ನೇತೃತ್ವ ವಹಿಸಿರುವ ಮಂಜುನಾಥ್, ಉಪವಿಭಾಗಾಧಿಕಾರಿಗಳಿಗೆ ಜೀತದಾಳುಗಳಿಗೆ ಅನುದಾನ ಬಿಡುಗಡೆ ಮಾಡಬಾರದೆಂದು ಪತ್ರ ನೀಡಿದ್ದಾರೆ.
ತಲಾ ನೀಡುವ ಪರಿಹಾರ ಹಣ ಎಷ್ಟೆಂಬುದರ ಬಗ್ಗೆ ನಿಗದಿ ಪಡಿಸಿರುವ ಸರ್ಕಾರದ ಆದೇಶದ ಪ್ರತಿಯನ್ನು ಆರ್ಹ ಫಲಾನುಭವಿಗಳಿಗೆ ನೀಡದೆ, ಗೌಪತ್ಯೆ ಕಾಪಾಡುತ್ತಾ ವಂಚಿಸಿದ್ದಾರೆ ಹಾಗೂ ಕೆಲವರಿಗೆ 17 ಸಾವಿರ, 15 ಸಾವಿರ, 10 ಸಾವಿರ, 7 ಸಾವಿರ ರೂ.ಗಳ ಏರುಪೇರು ಮಾಡಿ ಹಣ ಹಂಚಿಕೆ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಜೀತದಾಳುಗಳಿಗೆ ನೀಡಿದ ಅಕ್ಕಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿಲ್ಲ. ಜೀತವಿಮುಕ್ತರ ಹೆಸರಿನಲ್ಲಿ ಮೋಸ ಮಾಡಿರುವ ಈ ಇಬ್ಬರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಜೀವಿಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ತಿಮ್ಮಯ್ಯ, ಎಂಆರ್ಎಚ್ಎಸ್ ತಾಲ್ಲೂಕು ಅಧ್ಯಕ್ಷ ಹನುಮಪ್ಪ, ಕಸಾಪುರ ಗೋವಿಂದಯ್ಯ, ಎಂ.ಎಸ್.ಸಿದ್ದಪ್ಪ, ಕಲುಮೆನಹಳ್ಳಿ ಗೋವಿಂದಪ್ಪ, ರೆಡ್ಡಿಹಳ್ಳಿ ಗಂಗಪ್ಪ, ತೋಟಮಡಗು ನರಸಿಂಹಪ್ಪ, ಸಂಜೀವಪ್ಪ, ಗೋವಿಂದಪ್ಪ, ಶನಿವಾರಪ್ಪ, ನರಸಿಂಹಣ್ಣ, ಶಾಮಣ್ಣ ಹಾಗೂ ವಿವಿಧ ಹೋಬಳಿಯ ಜೀತವಿಮುಕ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ