ಮಧುಗಿರಿ :
1929ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರವರು ಉಪವಿಭಾಗಾಧಿಕಾರಿಗಳಾಗಿದ್ದ ಅವಧಿಯಲ್ಲಿ ಪಟ್ಟಣದ ತುಮಕೂರು ಗೇಟ್ ಬಳಿ ಈಜು ಕೊಳವನ್ನು ನಿರ್ಮಿಸಿದ್ದರು. ಅದನ್ನು ಇತ್ತೀಚೆಗೆ ಪುರಸಭೆಯವರು ನೆಲ ಸಮ ಮಾಡಿದ್ದಾರೆ, ಅಲ್ಲದೆ ಮತ್ತೆ ಆ ಸ್ಥಳದಲ್ಲಿ ಸುಸಜ್ಜಿತ ಈಜುಕೊಳವನ್ನೆ ನಿರ್ಮಿಸದೆ, ವಾಣಿಜ್ಯ ಮಳಿಗೆಗಳನ್ನು ಕಟ್ಟಲು ತಯಾರಿ ನಡೆದಿದೆ. ಇದನ್ನು ಪ್ರಶ್ನಿಸಿ ಪಟ್ಟಣದ ಶ್ಯಾನುಭೋಗರ ಕುಟುಂಬದವರಾದ ಎಂ.ಪಿ.ಶಿವರಾಂ, ಎಂ.ಪಿ.ಸತೀಶ್, ಎಂ.ಪಿ. ಮಂಜುಳಾರವರುಗಳು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು.
ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈಜುಕೊಳ ನಿರ್ಮಾಣಕ್ಕೆ ಬೇಕಾಗಿದ್ದ ಜಾಗವನ್ನು ಅಂದಿನ ಮೈಸೂರು ಸರ್ಕಾರಕ್ಕೆ ಶ್ಯಾನುಭೋಗರ ಕುಟುಂಬದವರು ದಾನವಾಗಿ ನೀಡಿದ್ದಾರೆ. ಈ ಬಗ್ಗೆ ದಾಖಲೆ ಪರಿಶೀಲಿಸಿರುವ ನ್ಯಾಯಾಲಯವು ನೆಲ ಸಮ ಮಾಡಿರುವ ಈಜು ಕೊಳದ ಜಾಗದಲ್ಲಿ ದಾವೆ ಇತ್ಯರ್ಥ ವಾಗುವವರೆವಿಗೂ ಯಾವುದೇ ವಾಣಿಜ್ಯ ಮಳಿಗೆ ನಿರ್ಮಾಣ ಅಥವಾ ಇತರೆ ಯಾವ ಕಾಮಗಾರಿಗಳನ್ನು ಕೈಗೊಳ್ಳಬಾರದು. ಮತ್ತೆ ಸುಸಜ್ಜಿತವಾದ ಈಜುಕೊಳ ನಿರ್ಮಿಸಲೆ ಬೇಕೆಂದು ಸಿವಿಲ್ ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ್ ರವರು ಪ್ರತಿಬಂಧಕಾಜ್ಞೆ ಹೊರಡಿಸಿ, ಪ್ರತಿವಾದಿ ಪುರಸಭೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವಾದಿಗಳ ಪರವಾಗಿ ವಕೀಲರಾದ ಪಿ.ದತ್ತಾತ್ರೇಯ ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
