ಅಧಿಕಾರಿಗಳು ರಾಜಕೀಯ ಬಿಟ್ಟು ಜನರ ಕೆಲಸ ಮಾಡಿ

 ಮಧುಗಿರಿ :

       ತಾಲ್ಲೂಕಿನಲ್ಲಿ ಅಧಿಕಾರಿಗಳು ರಾಜಕೀಯ ಮಾಡುವುದು ಬೇಡ. ಚುನಾವಣೆ ಬಂದಾಗ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತು ನಾನು ಮಾಡಿಕೊಳ್ಳುತ್ತೇವೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಡಗತ್ತೂರಿನ ಪಿಡಿಓ ರವರು ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ನರೇಗಾ ಕಾಮಗಾರಿಗಳನ್ನು ನೀಡುತ್ತಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಬೆಂಬಲಿತರಿಗೆ ನೀಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಜನಗಳ ಸೇವೆ ಮಾಡಬೇಕು ಹೊರತು, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದರು.

     ಪಿ.ಡಿ.ಒ.ಗಳು ಅವರ ಪಂಚಾಯಿತಿಗಳಲ್ಲಿ ಅವರದೆ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುತ್ತಿದ್ದಾರೆ. ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲವರು ಅಕ್ರಮ ವೆಸಗುತ್ತಿದ್ದು, ತನಿಖೆಗೆಗೆ ಮುಂದಾದರೆ ಕೆಲಸ ಕಳೆದು ಕೊಳ್ಳುತ್ತಾರೆ. ದೂರುಗಳ ಬಾರದಂತೆ ಕರ್ತವ್ಯ ನಿರ್ವಹಿಸಿ ಎಂದು ಎಚ್ಚರಿಕೆ ನೀಡಿದರು.

      ಗ್ರಾಮೀಣ ಪ್ರದೇಶದಿಂದ ಹೆರಿಗೆಗಾಗಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ಉದ್ದೇಶ ಪೂರ್ವಕವಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಹಾಗೂ ಬೇರೆ ಕಡೆ ಸಿಸೇರಿಯನ್ ಹೆರಿಗೆಗೆ ಕಳುಹಿಸಿಕೊಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಬಡ ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿ ಅವರ ಬಳಿ ಸೈ ಎನ್ನಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆಯವರಿಗೆ ಸಲಹೆ ನೀಡಿದರು.
ಕೃಷಿ ಇಲಾಖೆ ರೈತರಿಗೆ ಹತ್ತಿರವಾದ ಇಲಾಖೆಯಾಗಿದ್ದು, ರೈತರು ಕೂಡ ತಿಳಿವಳಿಕೆ ಹೊಂದಿದ್ದಾರೆ. ಮಧುಗಿರಿಯಲ್ಲಿ ರಾಗಿ ಖರೀದಿ ಕೇಂದ್ರವಿದ್ದು, ಹೆಚ್ಚು ರಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

      ಶನಿವಾರ ಭಾನುವಾರ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸಂವಿಧಾನ ಶಿಲ್ಪಿಯ ಜೀವನ ಚರಿತ್ರೆ ಸಾರುವ ಮಹಾನಾಯಕ ಧಾರಾವಾಹಿ ಪ್ರಸಾರ ವೇಳೆಯಲ್ಲಿ ವಿದ್ಯುತ್ ಕಡಿತಗೊಳಿಸದಂತೆ ಬೆಸ್ಕಾಂ ಎ.ಇ.ಇ ಕೃಷ್ಣಮೂರ್ತಿ ರವರಿಗೆ ಸೂಚಿಸಿದರು.

      ತಾಲ್ಲೂಕಿನಲ್ಲಿ 125 ನ್ಯಾಯಬೆಲೆ ಅಂಗಡಿಗಳಿದ್ದು, ಗ್ರಾಹಕರಿಗೆ ತೊಂದರೆ ಕೊಡುತ್ತಿರುವವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚೌಡಪ್ಪ, ತಿಮ್ಮಯ್ಯ, ಮಂಜುಳಾ, ತಾ.ಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ತಾ.ಪಂ ಇಓ ದೊಡ್ಡಸಿದ್ದಯ್ಯ, ಎ.ಇ.ಇ ಸುರೇಶ್‍ರೆಡ್ಡಿ, ಹೊನ್ನೇಶಪ್ಪ, ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಸಮಾಜ ಕಲ್ಯಾಣಾಧಿಕಾರಿ ಹರೀಶ್, ಸಿ.ಡಿ.ಪಿ.ಒ ಅನಿತಾ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಎ. ನಾಗರಾಜು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap