ಮಧುಗಿರಿ :  ಜಿಪಂ ಕ್ಷೇತ್ರಗಳ ಯಥಾಸ್ಥಿತಿಗೆ ಒತ್ತಾಯ

 ಮಧುಗಿರಿ : 

      ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯು ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ವರದರಾಜು ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

      ಹೊಸದಾಗಿ ಬಡವನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚಿಸಿದ್ದು, ಈ ಕ್ಷೇತ್ರಕ್ಕೆ ಚಿನಕವಜ್ರ ಗ್ರಾಮ ಪಂಚಾಯಿತಿ ಸೇರಿಸಲಾಗಿದ್ದು, 21 ಕಿ.ಮೀ ಅಂತರವಿದೆ. ಅದೇ ರೀತಿ ಕೊಟಗಾರ್ಲಹಳ್ಳಿ ಕ್ಷೇತ್ರಕ್ಕೆ ಹಿಂದಿನ ಜಿಲ್ಲಾ ಪಂಚಾಯಿತಿ ಕ್ಷೇತ್ರವಾದ ಸಿದ್ದಾಪುರದಿಂದ ಸಿದ್ದಾಪುರ, ಮರುವೇಕೆರೆ, ಗಂಜಲಗುಂಟೆ ಪಂಚಾಯಿತಿಗಳನ್ನು ಸೇರಿಸಿರುವುದು ಆಕ್ಷೇಪಾರ್ಹವಾಗಿದೆ. ಈ ಪಂಚಾಯಿತಿಗಳು ಸಿದ್ದಾಪುರ ಕ್ಷೇತ್ರಕ್ಕೆ 8 ಕಿಲೋ ಮೀಟರ್ ವ್ಯಾಪ್ತಿಯ ಅಂತರದಲ್ಲಿರುತ್ತವೆ. ಈ ಪಂಚಾಯಿತಿ ವ್ಯಾಪ್ತಿಯ ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸುಮಾರು 15 ಕಿ.ಮೀ ದೂರ ಕ್ರಮಿಸಬೇಕಾಗಿದೆ. ಹೊಸಕೆರೆ ಜಿ.ಪಂ ಕ್ಷೇತ್ರವನ್ನು ಹೊಸದಾಗಿ ರಚಿಸಲಾಗಿದ್ದು, ಐತಿಹಾಸಿಕ ಸ್ಥಳ ಹಾಗೂ ಹೋಬಳಿ ಕೇಂದ್ರವಾದ ಮಿಡಿಗೇಶಿ ಕ್ಷೇತ್ರವನ್ನು ಕೈ ಬಿಟ್ಟಿರುವುದು ಸರಿಯಲ್ಲ. ಪುರವರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈ ಬಿಟ್ಟು, ಬ್ಯಾಲ್ಯ ಜಿಲ್ಲಾ ಪಂಚಾಯಿತಿ ಕೇತ್ರವನ್ನು ಹೊಸದಾಗಿ ರಚಿಸಲಾಗಿದ್ದು, ಇದನ್ನು ರದ್ದುಪಡಿಸಿ ಈ ಹಿಂದೆ ಇದ್ದ ಪುರವರ ಕ್ಷೇತ್ರವನ್ನು ಮುಂದುವರೆಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

     ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ಹಿಂದೆ ಇದ್ದಂತಹ 6 ಕ್ಷೇತ್ರಗಳನ್ನು ಉಳಿಸಿಕೊಂಡು ಹೊಸದಾಗಿ ರಚಿಸಿರುವ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಅಕ್ಕ ಪಕ್ಕದ ಪಂಚಾಯಿತಿಗಳನ್ನು ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ಸದಸ್ಯ ಜೆ.ಡಿ.ವೆಂಕಟೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್ ರಾಜಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಮುಖಂಡರಾದ ಎಂ.ಕೆ.ನಂಜುಂಡಯ್ಯ, ಎಸ್.ಡಿ.ಕೃಷ್ಣಪ್ಪ, ಎಂ.ಎಸ್.ಶಂಕರನಾರಾಯಣ, ಸಿದ್ದಾಪುರ ರಂಗಶಾಮಯ್ಯ, ಸುವರ್ಣಮ್ಮ, ಬಂದ್ರೇಹಳ್ಳಿ ನಾಗಾರ್ಜುನ, ವಕೀಲ ತಿಮ್ಮರಾಜು, ಬಾಬಾ ಫಕೃದ್ದಿನ್, ರಂಗಪ್ಪ, ನಾಗರಾಜು, ಮಂಜುನಾಥ್ ಹಾಗೂ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link