ಮಧುಗಿರಿ ಪುರಸಭೆಯನ್ನು ನಗರ ಸಭೆಯಾಗಿಸೋಣ : ಶಾಸಕ

 ಮಧುಗಿರಿ :

     ಪುರಸಭೆಯನ್ನು ಆಡಳಿತಾತ್ಮಕವಾಗಿ ನಗರಸಭೆಯನ್ನಾಗಿಸಲು ಎಲ್ಲರೂ ಪ್ರಯತ್ನಿಸೋಣವೆಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು

ಅವರು ಮಂಗಳವಾರ ಪುರಸಭಾ ಕಾರ್ಯಾಲಯದಲ್ಲಿ ನಡೆದ 2020-21ನೆ ಸಾಲಿನ ಆಯ ವ್ಯಯ ಮಂಡನೆ ಸಭೆಯಲ್ಲಿ ಮಾತನಾಡಿದರು. 2011ರ ಜನಗಣತಿ ಪ್ರಕಾರ ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 29ಸಾವಿರ ಜನಸಂಖ್ಯೆಯಿದ್ದು, 50ಸಾವಿರ ಜನಸಂಖ್ಯೆ ದಾಟಿದರμÉ್ಟೀ ನಗರಸಭೆಯನ್ನಾಗಿಸಬಹುದು. ಇತ್ತೀಚೆಗೆ ನೆಲಮಂಗಲ ನಗರ ಸಭೆಯನ್ನಾಗಿ ಸರ್ಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಪುರಸಭೆಗೆ ಹೊಂದಿಕೊಂಡಿರುವ ಗ್ರಾಮಗಳನ್ನು ಸೇರ್ಪಡೆ ಮಾಡುವುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.

ಚಿನಕವಜ್ರ, ಬಿಜವರ, ಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳನ್ನು ಸೇರ್ಪಡೆ ಮಾಡಿಕೊಂಡರೆ ನಗರಸಭೆಯನ್ನಾಗಿಸುವ ಮಾನದಂಡಗಳಿಗೆ ಅನುಕೂಲವಾಗಬಹುದು. ಅದಕ್ಕೆ ಗ್ರಾಮ ಪಂಚಾಯಿತಿಗಳ ಅಡಳಿತ ಮಂಡಳಿಯವರು ಸರ್ಕಾರಕ್ಕೆ ಸೇರ್ಪಡೆ ಬಗ್ಗೆ ನಡಾವಳಿ ಮಾಡಬೇಕಾಗುತ್ತದೆ. ಇದು ಸಾಧ್ಯವೇ? ಹಲವು ತಿಂಗಳುಗಳ ಹಿಂದೆ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆದಿದೆ. 2021ರ ಜನಗಣತಿಯು ಸಹ ಪೂರಕ ಆಗೋದಿಲ್ಲ ಎಂದೆನಿಸುತ್ತದೆ. 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಿದರೆ ಕೃಷಿ ಭೂಮಿಗಳು ಹೆಚ್ಚಾಗಿರುವುದರಿಂದ ಇದು ಸಾಧ್ಯವಾಗುವುದಿಲ್ಲ, ಪಟ್ಟಣ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗದ ಹೊರತು ನಗರಸಭೆ ಘೋಷಣೆಗೆ ತಡವಾಗಲಿದೆ ಎಂದರು.

ಇಚ್ಛಾಶಕ್ತಿ ಕೊರತೆ:

      ಪುರಸಭೆಗೆ ಸೇರಿರುವ ಎಂಭತ್ತೈದು ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನೆನೆಗುದಿಗೆ ಬಿದ್ದಂತಾಗಿದೆ. ಇಲ್ಲಿನ ಪುರಸಭೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂಬ ನೆಪವೊಡ್ಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಪುರಸಭೆಗೆ ಆದಾಯ ಹೆಚ್ಚಿಸುವ ಕೆಲಸಗಳಿಗೆ ಇಲ್ಲಿನ ಪುರಸಭೆಯ ಕೆಲವು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

      ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟು ಹರಾಜು ಪ್ರಕ್ರಿಯೆ ಮಾಡಬೇಕು, ಡೂಂಲೈಟ್ ವೃತ್ತದಲ್ಲಿರುವ ಐಡಿಎಸ್ ಎಂಟಿ ಯೋಜನೆಯಡಿ ಮಹಡಿಯ ಮೇಲಿರುವ ಹನ್ನೊಂದು ಅಂಗಡಿಗಳು ನಿರ್ಮಾಣವಾಗಿ ದಶಕಗಳೆ ಕಳೆದರೂ ಹರಾಜು ಮಾಡದೆ ಖಾಲಿಯಾಗಿಯೆ ಉಳಿದಿದೆ. ವಾಣಿಜ್ಯ ಮಳಿಗೆಗಳ ತೆರವಿಗೆ ನೋಟಿಸ್ ಜಾರಿಯ ಅವಧಿ ಏಪ್ರಿಲ್ -4 ಕ್ಕೆ ಪೂರ್ಣಗೊಳ್ಳಲಿದೆ ಎಂದು ಪುರಸಭಾ ಅಧಿಕಾರಿ ಮಾಹಿತಿ ನೀಡಿದಾಗ ವಾಣಿಜ್ಯ ಮಳಿಗೆಗಳ ಮುಂದಿನ ಸಭೆಯಲ್ಲಿ ಚರ್ಚಿಸೋಣವೆಂದು ಶಾಸಕರು ತಿಳಿಸಿದರು.

      ಮೂವತ್ತು ಕೋಟಿ ರೂ. ಅನುದಾನಕ್ಕೆ ಮನವಿ: ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಶಾಸಕ ಎಂ. ವಿ ವೀರಭದ್ರಯ್ಯನವರಿಗೆ ಪುರಸಭೆಯ 23 ವಾರ್ಡುಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅನುದಾನ ಮಾಡಿಸುವಂತೆ ಮನವಿ ಪತ್ರ ಸಲ್ಲಿಸಿದರು.

     ಮನವಿ ಸ್ವೀಕರಿಸಿ ಮಾತನಾಡಿದ ಎಂ.ವಿ.ವೀರಭದ್ರಯ್ಯ, ಎಸಿಪಿ ಟಿಎಸ್‍ಪಿ ಯೋಜನೆಯಡಿ ಗರಿಷ್ಠ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿ, ಪುರಸಭೆಗೆ ಮೂರು ಕೋಟಿ ರೂ.ಗಳ ವಿಶೇಷ ಅನುದಾನ ಸರಕಾರದಿಂದ ಬಿಡುಗಡೆಯಾಗಲಿದೆ. ಈ ಯೋಜನೆಗೆ ಮಧುಗಿರಿ ತಾಲ್ಲೂಕು ಸೇರ್ಪಡೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸರ್ಕಾರದಿಂದ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದರು.

ಟ್ರೇಡ್ ಲೈಸೆನ್ಸ್, ಬಾರ್ ಮತ್ತು ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಕಲ್ಯಾಣಮಂಟಪಗಳ ತೆರಿಗೆಯನ್ನು ಹೆಚ್ಚಿಸಿ, ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿಗಳು ತಲೆ ಎತ್ತುತ್ತಿದ್ದು, ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಸಂತೆ ಮೈದಾನದಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ವಿದ್ಯುತ್ ಬೆಳಕಿನ ಕೊರತೆಯ ಬಗ್ಗೆ, ಸಂತೆಗಳಲ್ಲಿ ಪಿಕ್ ಪಾಕೆಟರ್‍ಗಳ ಹಾವಳಿ ತಪ್ಪಿಸಲು ಸಿಸಿ ಕ್ಯಾಮರಾ ಅಳವಡಿಕೆ, ಘನ ತ್ಯಾಜ್ಯ ಸಂಗ್ರಹ, ಯುಜಿಡಿ ಕೆಲಸ ಸರಿಯಾಗಿ ನಡೆಯದೆ ಇರುವ ಬಗ್ಗೆ ಚರ್ಚೆಗಳು ನಡೆದವು.
2021-22 ನೆ ಸಾಲಿನ ಆಯವ್ಯಯ : 3.79 ಕೋಟಿ ರೂ. ಜಮೆ ಆಗಲಿದ್ದು, 3.67 ಕೋಟಿ ರೂ. ಗಳು ಖರ್ಚಾಗಿ, 12.19 ಲಕ್ಷ ರೂ. ಉಳಿಕೆಯಾಗಲಿದೆ. ಅಂದಾಜು 33.64 ಲಕ್ಷ ರೂ.ಗಳ ಉಳಿತಾಯ ಬಜೆಟ್ ನ್ನು ಪುರಸಭೆಯ ಲೆಕ್ಕಿಗರಾದ ಸಲ್ಮಾ ಕೌಸರ್ ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಅಮರ ನಾರಾಯಣ್, ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ, ಸದಸ್ಯರುಗಳಾದ ಎಂ. ವಿ.ಗೋವಿಂದರಾಜು, ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಲಾಲಾಪೇಟೆ ಮಂಜುನಾಥ್, ಹಸೀನಾ ಬಾನು, ಎಂ.ವಿ.ಮಂಜುನಾಥಾಚಾರ್, ನಸೀಮಾಬಾನು, ಜಿ.ಎಸ್.ಶೋಭಾರಾಣಿ, ಪಾರ್ವತಮ್ಮ, ಬಿ.ಎಚ್.ನಾಗಲತಾ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap