ಮಧುಗಿರಿ :
ಮದ್ಯದ ಅಂಗಡಿಯನ್ನು ಗ್ರಾಮದಲ್ಲಿ ತೆರೆಯದಂತೆ, ತಮ್ಮ ಗ್ರಾಮವನ್ನು ಕುಡುಕರ ಗೂಡಾಗಿಸದೆ ರಕ್ಷಿಸಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣನವರನ್ನು ವಿಠಲಾಪುರ ಗ್ರಾಮಸ್ಥರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿರುವ ಆರ್.ಎನ್. ಬಾರ್ ಅಂಡ್ ರೆಸ್ಟೋರೆಂಟನ್ನು ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಠಲಾಪುರ ಗ್ರಾಮಕ್ಕೆ ವರ್ಗಾಯಿಸುವ ಪ್ರಯತ್ನ ನಡೆದಿದೆ. ಕಡು ಬಡವರು ಹೆಚ್ಚಿರುವ ಈ ಗ್ರಾಮದಲ್ಲಿ ದಿನಗೂಲಿ ಮಾಡುತ್ತ ಜೀವನ ಸಾಗಿಸುತ್ತಿರುವ ಹಾಗೂ ಪರಿಶಿಷ್ಟ ಸಮುದಾಯದವರು ಗ್ರಾಮದಲ್ಲಿ ಇದ್ದು, ಕೆಲವರು ಕುಡಿತದ ಚಟಕ್ಕೆ ಬಲಿಯಾಗಿ ಕಳ್ಳತನ, ಮೋಸ, ಗಲಾಟೆಗಳು ಆಗುವ ಸಂಭವವಿದೆ.
ವ್ಯವಸಾಯಕ್ಕೆ ಯೋಗ್ಯವಾದ ಭೂಮಿಗಳಲ್ಲಿ ಗಾಜಿನ ಚೂರುಗಳು ಕಂಡು ಬರುವುದರ ಜೊತೆಗೆ ಕೃಷಿ ಭೂಮಿಗಳು ಯೋಗ್ಯವಿಲ್ಲದಂತಾಗುತ್ತವೆ ಮತ್ತು ಕೆಲವರ ವ್ಯವಸ್ಥಿತ ಪಿತೂರಿಯಿಂದಾಗಿ ಕುಟುಂಬಗಳು ಬೀದಿ ಪಾಲಾಗುವ ಲಕ್ಷಣದ ದಿನಗಳು ಕಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ಗಡಿ ಗ್ರಾಮದಲ್ಲಿ ಮದ್ಯದ ಅಂಗಡಿಯನ್ನು ತೆರೆಯ ಬಾರದೆಂದು ಗ್ರಾಮಸ್ಥರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕರು, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೂರ್ತಿ, ವಿ.ಹೆಚ್.ಕಾಂತರಾಜು, ರಾಮಾಂಜಿ, ಸುಬ್ರಹ್ಮಣ್ಯಂ, ರವಿ, ಆಂಜನೇಯಲು, ಈಶ್ವರಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ