ಮಧುಗಿರಿ :
ತಾಲ್ಲೂಕಿನಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬಿ ಕಳೆದ ಒಂದು ವಾರದಿಂದ 444 ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನ 109 ಪ್ರಕರಣಗಳು ಕಂಡು ಬಂದು ಹಲವಾರು ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ದಿನೆ ದಿನೆ ಏರಿಕೆ ಕಂಡು ಬರುತ್ತಿದೆ.
ಇದೂವರೆವಿಗೂ ತಾಲ್ಲೂಕಿನಾದ್ಯಂತ ಸುಮಾರು 23 ಸಾವಿರ ಜನರು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರೂ ಸಹ ಏಪ್ರಿಲ್ 22 ರಂದು ಒಂದೇ ದಿನ 128 ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ ಶತಕ ದಾಟಿದಂತಾಗಿದೆ. ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳಾದ ಶ್ರೀ ರಾಘವೇಂದ್ರ ಆಸ್ಪತ್ರೆ ಮತ್ತು ಅನುಪಮ ಕ್ಲಿನಿಕ್‍ನಲ್ಲಿ ರೋಗಿಗಳು ಜ್ವರ ಮತ್ತಿತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 3 ದಿನಗಳಿಂದ ಈ ಎರಡೂ ಆಸ್ಪತ್ರೆಗಳು ಚಿಕಿತ್ಸೆ ಕೊಡುವುದನ್ನು ನಿಲ್ಲಿಸಿದ ಪರಿಣಾಮ, ಕೋವಿಡ್ ಪರೀಕ್ಷೆಗಳು ಹೆಚ್ಚಾಗಿ ಸೋಂಕಿತರ ಹೆಚ್ಚು ಪ್ರಕರಣಗಳ ಪತ್ತೆಗೂ ಕಾರಣವಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪಟ್ಟಣದ 2 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿಲ್ಲಿಸಿದ್ದÀಕ್ಕೆ ಸಾರ್ವಜನಿಕ ವಲಯಗಳಲ್ಲಿ ನಾನಾ ತರಹದ ದೂರುಗಳು ಸಹ ಕೇಳಿ ಬಂದಿವೆ. ಏಪ್ರಿಲ್ 13 ರಂದು 19, 14-21, 15-30, 16-34, 17-38, 18-28, 19-28, 20-58, 21-48 ಮತ್ತು 22 ರಂದು 124 ಸೋಂಕಿತರು ಪತ್ತೆಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಹನ್ನೆರಡರ ನಂತರ ತಹಸೀಲ್ದಾರ್, ಸಿಪಿಐ, ಪಿಎಸೈ, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಜೀಪ್‍ಗಳು ಒಮ್ಮೆಲೆ ಪಟ್ಟಣದ ಹೃದಯ ಭಾಗದಲ್ಲಿರುವ ಡೂಂಲೈಟ್ ವೃತ್ತದಲ್ಲಿ ಕಂಡು ಬಂದು, ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸುವ ಮೂಲಕ ಲಾಕ್ ಡೌನ್ ಮಾದರಿಯಲ್ಲೇ ದಿಢೀರನೆ ಕ್ರಮ ಕೈಗೊಂಡ ಕಾರಣ, ವ್ಯಾಪಾರಸ್ಥರಲ್ಲಿ ಒಂದೆಡೆ ಆತಂಕ ಮತ್ತೊಂದೆಡೆ ಸ್ವಯಂ ಪ್ರೇರಣೆಯಿಂದ ಲಾಕ್‍ಡೌನ್‍ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೆ ಈ ಕ್ರಮ ಸಹಕಾರಿಯಾಯಿತು. ಪಟ್ಟಣದಲ್ಲಿ ಈಗಾಗಲೇ ಸಿನಿಮಾ ಮಂದಿರ, ದೇವಸ್ಥಾನ, ಚರ್ಚ್, ಮಸೀದಿಗಳು ಬಂದ್ ಆಗಿದ್ದು, ಬ್ಯಾಂಕ್ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ಸುಗಳ ಸಂಚಾರ ಇದ್ದರೂ ಪ್ರಯಾಣಿಕರ ಕೊರತೆ ಕಂಡುಬಂತು.
ಬುಧವಾರ ರಾತ್ರಿ ಎಂ.ಎನ್.ಕೆ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚು ಜನ ಜಮಾಯಿಸಿದ್ದರೆಂಬ ಸುಳ್ಳು ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಮಂಗಳ ಗೌರಮ್ಮ ಮತ್ತು ಪುರಸಭಾ ಮುಖ್ಯಾಧಿಕಾರಿ ಅಮರ್ ನಾರಾಯಣ್ ಪರಿಶೀಲಿಸಿ ಕೇವಲ ವಧುವರರು ಸೇರಿ ಹದಿನೈದು ಮಂದಿ ಇದ್ದುದು ಕಂಡು ಹಿಂದಿರುಗಿದರು. ಕೋವಿಡ್ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆಯ ಸಿಬ್ಬಂದಿಗಳ ಕರ್ತವ್ಯ ಹೆಚ್ಚಾಗಿದ್ದು ಇಲಾಖೆಯ ಜೀಪುಗಳಲ್ಲಿ ಸತತವಾಗಿ ಹಗಲಿರುಳೆನ್ನದೆ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಆದೇಶ ಮಾಡುತ್ತಿದ್ದ ದೃಶ್ಯಗಳು ಪಟ್ಟಣದಲ್ಲಿ ಕಂಡು ಬಂದಿದೆ.
ಇನ್ನೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಯ ಸಂಖ್ಯೆಯಲ್ಲಿ ದಿನೆ ದಿನೆ ಹೆಚ್ಚಳ ಕಂಡು ಬರುತ್ತಿದ್ದು, ಅಲ್ಲಿನ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರ ಗೋಳು ಹೇಳ ತೀರದ್ದಾಗಿತ್ತು. ರೋಗಿಗಳಿಗೆ ಬೆಡ್‍ಗಳು ಹಾಗೂ ಆ್ಯಕ್ಸಿಜನ್ ಹೊಂದಿಸುವುದು ಬಹಳ ದುಸ್ತರವಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ರಾತ್ರಿ ಜತೆಗೆ ವೀಕೆಂಡ್ ಕಫ್ರ್ಯೂ ಈಗಾಗಲೇ ಘೋಷಣೆಯಾಗಿದ್ದು, ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ವಸ್ತುಗಳು, ಶೇವಿಂಗ್ ಸಲೂನ್‍ಗಳು, ಬ್ಯೂಟಿ ಪಾರ್ಲರ್‍ಗಳು, ಹಣ್ಣು – ತರಕಾರಿ – ಹೂವು, ಮೆಡಿಕಲ್ ಸ್ಟೋರ್, ದಿನಸಿ ಅಂಗಡಿಗಳು ತೆರೆಯಬಹುದು. ಹೋಟೆಲ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾಡಿಕೊಂಡು ತೆರೆಯಬಹುದೆಂಬ ಆದೇಶ ಬಂದಿದೆ ಎಂದು ತಹಸೀಲ್ದಾರ್ ವೈ.ರವಿ ತಿಳಿಸಿದ್ದಾರೆ.
ಸಿಪಿಐ ಎಂ.ಎಸ್.ಸರ್ದಾರ್, ಪಿಎಸ್‍ಐ ಮಂಗಳಗೌರಮ್ಮ, ಟಿಎಚ್‍ಒ ರಮೇಶ್ ಬಾಬು, ಕಂದಾಯ ಇಲಾಖೆಯವರು, ಪುರಸಭೆ ಇಲಾಖೆಯವರು ಲಾಕ್ ಡೌನ್ ಮಾಡಿಸುವ ಸಂದರ್ಭದಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ