ಮಧುಗಿರಿ :
ತಾಲ್ಲೂಕಿನ ಪುರವರ ಹೋಬಳಿಯ ಕೊಡಿಗೇನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಕೊಂಡವಾಡಿ-ಭೈರನಹಳ್ಳಿ ಗ್ರಾಮದ ರಸ್ತೆಯ ಮಾರ್ಗ ಮಧ್ಯೆ ಹಗಲಿರುಳೆನ್ನದೆ ಗುಡಿಸಲು ಹೋಟೆಲ್ ಒಂದರಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಮದ್ಯ, ಗುಟ್ಕಾ, ಸಿಗರೇಟ್ ಮಾರಾಟ ಎಗ್ಗಿಲ್ಲದೆ ಸಾಗಿದೆ.
ದೇಶ ಸೇರಿದಂತೆ ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ರುದ್ರ ನರ್ತನಕ್ಕೆ ಜನತೆ ತತ್ತರಗೊಂಡಿದ್ದು, ಅಂಗಡಿ ಮುಂಗಟ್ಟುಗಳನ್ನು ಕೋವಿಡ್-19 ಮಾರ್ಗಸೂಚಿಗಳ ಅನ್ವಯ ತೆರೆಯಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನಿಂದ ಹೊರಡಿಸಿರುವ ಆದೇಶನ್ನು ಉಲ್ಲಂಘಿಸಿದ್ದಾರೆಂದು ಹೇಳಲಾಗುತ್ತಿದೆ.
ಅಬಕಾರಿ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಹಾಗೂ ಬೆಸ್ಕಾಂ ಇಲಾಖೆಗಳಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಗ್ರಾಮದಲ್ಲಿರುವ ಗುಡಿಸಲಿನ ಗೌಡ್ರು ಡಾಬ ಒಂದರಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ ಮದ್ಯ ಹಾಗೂ ಗುಟ್ಕಾ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಕೊರೋನಾ ಹಾಟ್ ಸ್ಪಾಟ್ ಎಂದು ಈಗಾಗಲೇ ಗುರುತಿಸಿರುವ ಹೋಬಳಿ ಕೇಂದ್ರಕ್ಕೆ ಸೇರಿದ ಪೂಜಾರಹಳ್ಳಿ ಗ್ರಾಮದ ಆಟೋ ಗೋವಿಂದಪ್ಪ ಎಂಬ ವ್ಯಕ್ತಿ ರಾಜಾರೋಷವಾಗಿ ಅನಧಿಕೃತ ಡಾಬಾ ಹೋಟೆಲ್ ತೆರೆದು, ಸಾರ್ವಜನಿಕರಿಗೆ ಯಾವುದೇ ಕೋವಿಡ್ ನಿಯಮಗಳ ಪಾಲನೆ ಮಾಡದೆ ಅಕ್ರಮವಾಗಿ ರಾತ್ರಿ ವೇಳೆಯಲ್ಲೂ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೊರೋನಾ ವೇಳೆಯಲ್ಲೂ ನೀವು ಮಾರಾಟ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಗೋವಿಂದಪ್ಪ ಮತ್ತು ಮಗ ಲಿಂಗರಾಜು ಹಲ್ಲೆ ನಡೆಸಲು ಮುಂದಾಗಿರುವ ಮತ್ತು ಹೋಟೆಲ್‍ನಲ್ಲಿ ಯಾರ ಭಯವಿಲ್ಲದೆ ಗ್ರಾಹಕರು ಊಟ ಮತ್ತು ಮದ್ಯ ಸೇವೆನೆ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಮೊಬೈಲ್‍ನ್ನು ಕಸಿದುಕೊಳ್ಳುತ್ತಿರುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಹರಳಾಪುರ ರಮೇಶ್ ಹಾಗೂ ಇನ್ನಿತರೆ ಪ್ರಜ್ಞಾವಂತರು ಸರ್ಕಾರದ ಆದೇಶ ಉಲ್ಲಂಘಿಸಿ ಅನಧಿಕೃತ ಡಾಬಾ ತೆರೆದು ಮದ್ಯಪಾನ ಮಾರಾಟ ಮಾಡುತ್ತಿರುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಹೋಟೆಲ್ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ