ಮಧುಗಿರಿ :
ಕೊರೊನಾ ಸೋಂಕಿತರನ್ನು ಆರೈಕೆ ಮಾಡುತ್ತಿರುವ ಕೆಲಸ ಶ್ಲಾಘನೀಯ. ಇಂತಹ ಕೆಲಸಗಳು ಇನ್ನೂ ಹೆಚ್ಚು ನಡೆಯಲಿ, ಜನರಲ್ಲಿ ಜಾಗೃತಿ ಮೂಡಲಿ ಎಂದು ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಅಭಿಪ್ರಾಯ ಪಟ್ಟರು.
ತಾಲೂಕಿನ ಕಸಬಾ ವ್ಯಾಪ್ತಿಯ ಬಂದ್ರೇಹಳ್ಳಿ ಮರುವೇಕೆರೆ ವ್ಯಾಪ್ತಿಯ ಮೀನಗೊಂದಿ ರಂಗನಾಥ ಸ್ವಾಮಿ ದೇವಾಲಯದ ತೇರಿನ ಬೀದಿಯಲ್ಲಿ ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಮಾಡಿ ಸ್ಥಳೀಯರು ಆರೈಕೆ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಜೊತೆಗೆ ಸ್ಥಳೀಯವಾಗಿ ಸಾರ್ವಜನಿಕರು ಇಂತಹ ಕೆಲಸಕ್ಕೆ ಸಹಕಾರ ನೀಡಿದರೆ ಕರೊನಾವನ್ನು ತಡೆಗಟ್ಟಬಹುದು. ಸುಮಾರು ಹದಿನಾರು ದಿನಗಳಿಂದ ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು ಅನೇಕ ಮಂದಿ ಗುಣಮುಖರಾಗಿದ್ದಾರೆ. ಕೆ.ಎನ್.ರಾಜಣ್ಣನವರ ಮಾರ್ಗದರ್ಶನದಲ್ಲಿ ಇಲ್ಲಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.
ಕೊರೊನಾವು ಬೇಗ ನಿರ್ಮೂಲನೆ ಆಗುವಂತದ್ದಲ್ಲ, ಅದರ ಜೊತೆಯಲ್ಲೇ ನಾವು ಬದುಕಬೇಕಾದ ಸ್ಥಿತಿ ಇದೆ. 18-44 ವರ್ಷದ ವಯೋಮಾನದವರಿಗೆ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿದ್ದು ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು ಮಾತನಾಡಿ ಊರಿನ ಹೊರಗೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಮಾರ್ಗದರ್ಶನ ನೀಡಿದ್ದು ಕೆ.ಎನ್.ರಾಜಣ್ಣನವರು. ಅವರು ಅಧಿಕಾರದಲಿ ಇಲ್ಲದಿದ್ದರೂ ಜನರ ನೋವಿಗೆ ಸ್ಪಂದಿಸುತ್ತಿರುವುದು ಅವರ ಜನಪರ ಕಾಳಜಿಯ ದ್ಯೋತಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಮರುವೇಕೆರೆ ವಿಎಸ್ಸೆಸ್ಸೆನ್ ಅಧ್ಯಕ್ಷ ಫಾಜಿಲ್ ಖಾನ್, ಶಿಕ್ಷಕ ಚಂದ್ರಶೇಖರಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಪುರವರ ವಿಎಸ್ಸೆಸ್ಸೆನ್ ಕಾರ್ಯದರ್ಶಿ ಟಿವಿಎಸ್ ಮಂಜು, ಗುತ್ತಿಗೆದಾರ ಡೈಯೆಟ್ ನಾಗರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್‍ಟಿಕೆ ವೆಂಕಟೇಶ್, ಗ್ರಾಮಸ್ಥರಾದ ರಂಗಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ