ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ವಿತರಿಸಿದ ಆರ್.ರಾಜೇಂದ್ರ

 ಮಧುಗಿರಿ :

      ತಾಲ್ಲೂಕಿನ ಕೊಡಿಗೇನಹಳ್ಳಿ ಮತ್ತು ಐ.ಡಿ.ಹಳ್ಳಿ ಹೋಬಳಿಗಳಲ್ಲಿರುವ ಕೊರೊನಾ ವಾರಿಯರ್ಸ್‍ಗಳಿಗೆ ಮತ್ತು ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಿಗೆ ಮೆಡಿಕಲ್ ಕಿಟ್‍ಗಳನ್ನು ವಿತರಿಸುವ ಹಾಗೂ ರೈತರು ಬೆಳೆದ ತರಕಾರಿಗಳನ್ನು ಖರೀದಿಸಿ ಬಡವರಿಗೆ ವಿತರಿಸಲು ಆರ್.ರಾಜೇಂದ್ರ ಕ್ರಮ ಕೈಗೊಂಡಿದ್ದಾರೆ.

     ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳೆನ್ನದೆ ಟೊಂಕಕಟ್ಟಿ ನಿಂತು ಕೆಲಸಮಾಡುತ್ತಿದ್ದು, ಕೆ.ಎನ್.ಆರ್ ಮತ್ತು ಆರ್.ಆರ್.ಅಭಿಮಾನಿ ಬಳಗ ಹಾಗೂ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಸಹಕಾರದಿಂದ ಈ ಎಲ್ಲಾ ತಂಡಗಳ ಮುಂದಾಳತ್ವವನ್ನು ವಹಿಸಿಕೊಂಡು ಗ್ರಾಮ ಗ್ರಾಮಗಳಲ್ಲಿ ಕೊರೊನಾ ವೈರಸ್ ಹರಡದಂತೆ ಜಾಗೃತಿ ಅಭಿಯಾನ ಕಾರ್ಯವನ್ನು ಸಮರೋಪಾದಿಯಲ್ಲಿ ನೇರವೇರಿಸುತ್ತಿದ್ದಾರೆ.

     ಈ ತಂಡಗಳು ಚಿಕ್ಕಮಾಲೂರು, ದೊಡ್ಡಮಾಲೂರು, ಕೊಡಿಗೇನಹಳ್ಳಿ, ಕಲಿದೇವಪುರ, ಶ್ರಾವಂಡನಹಳ್ಳಿ, ಕಡಗತ್ತೂರು, ತೆರಿಯೂರು, ಸಿಂಗನಹಳ್ಳಿ, ಮುದ್ದೇನಹಳ್ಳಿ, ಚಿಕ್ಕದಾಳವಾಟ ಗ್ರಾಮಗಳಲ್ಲಿ ಸಂಚರಿಸಿ ಐಸೋಲೇಷನ್‍ನಲ್ಲಿರುವ ಸೋಂಕಿತರಿಗೆ ಮೆಡಿಕಲ್ ಕಿಟ್ ವಿತರಿಸಿದರು.

      ಇದೇ ವೇಳೆ ವಿಶ್ವ ಹಸಿವಿನ ದಿನವಾದ ಶುಕ್ರವಾರದಂದು ಮುದ್ದೆನಹಳ್ಳಿ, ಗೋಪಗೊಂಡನಹಳ್ಳಿ, ಭಕ್ತರಹಳ್ಳಿಗಳಲ್ಲಿ ರೈತರು ಬೆಳೆದಿದ್ದ 6.5 ಟನ್‍ನಷ್ಟು ಟೊಮೆಟೋ, ಎಲೆಕೋಸು, ಬದನೆಕಾಯಿ, ಈರುಳ್ಳಿ, ಕ್ಯಾರೆಟನ್ನು ಖರೀದಿಸಿ ತಾಲೂಕಿನ ಗಡಿಭಾಗದಲ್ಲಿರುವ ತಿಪ್ಪಾಪುರ, ಜನಕಲೋಟಿ, ದಾದಗೊಂಡನಹಳ್ಳಿಯಲ್ಲಿರುವ ಗ್ರಾಮಸ್ಥರಿಗೆ ಹಂಚಲು ಸಿದ್ಧತೆಯನ್ನೂ ಸಹ ಮಾಡಿದ್ದಾರೆ.

 ಕರೋನಾ ಜಾಗೃತಿ :

      ಕೆ.ಎನ್.ಆರ್ ಮತ್ತು ಆರ್.ಆರ್ ಅಭಿಮಾನಿ ಬಳಗ ಹಾಗೂ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಡಿ.ಟಿ.ಸಂಜೀವಮೂರ್ತಿ ಅವರ ನೇತೃತ್ವದಲ್ಲಿ ಹತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎರಡು ವಾಹನಗಳಲ್ಲಿ ಮೇ.24 ರಿಂದ ಮಧುಗಿರಿ ಪಟ್ಟಣದಲ್ಲಿ ಆರಂಭಗೊಂಡ ಈ ಜಾಗೃತಿ ಅಭಿಯಾನವು ತಾಲ್ಲೂಕಿನ ಸುಮಾರು 40 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಯ ಪ್ರತಿ ಮನೆ ಮನೆಗೂ ತೆರಳಿ ಕರಪತ್ರಗಳನ್ನು ವಿತರಿಸಿ ಸಮೀಪದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

 ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ:

      ಕೊಡಿಗೇನಹಳ್ಳಿಯಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗೆ ಆರ್.ರಾಜೇಂದ್ರ ಭೇಟಿ ನೀಡಿ ಸಿಬ್ಬಂದಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡಿ ಗ್ರಾಹಕರಿಗೆ ಮಾಸ್ಕ್ ಧರಿಸುವುದು, ದ್ಯೆಹಿಕ ಅಂತರ, ಕುಡಿಯುವ ನೀರನ್ನು ಒದಗಿಸುವಂತೆ ತಿಳಿಸಿ ಸಿಬ್ಬಂದಿಯ ಅರೋಗ್ಯದ ಬಗ್ಗೆ ವಿಚಾರಿಸಿದರು.

ಪಿಎಚ್‍ಸಿ ಕೇಂದ್ರಕ್ಕೆ ಭೇಟಿ :

     ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೆಎನ್‍ಆರ್ ಮತ್ತು ಆರ್‍ಆರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ವತಿಯಿಂದ ಕೊರೊನಾ ಸೋಂಕಿತರಿಗಾಗಿ ಒದಗಿಸಲಾಗಿರುವ ಆಂಬ್ಯೂಲೆನ್ಸ್‍ನ ಅನುಕೂಲಗಳ ಬಗ್ಗೆ ವಿಚಾರಿಸಿ ನಂತರ ಕೊಡಿಗೇನಹಳ್ಳಿ ರೆಡ್‍ಜೋನ್ ಎಂದು ಗುರುತಿಸಿರುವುದರಿಂದ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

     ರಾಜೇಂದ್ರ ಅವರ ಜೊತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪಾವಗಡ ಪಿಎಲ್ ಡಿ ಬ್ಯಾಂಕ್‍ನ ಅಧ್ಯಕ್ಷ ಸೀತಾರಾಮ್, ಡಿಸಿಸಿ ಬ್ಯಾಂಕ್ ಮೆಲ್ವೀಚಾರಕ ಎನ್.ರಾಮಕೃಷ್ಣ, ಚಿಕ್ಕಮಾಲೂರು ಗ್ರಾಪಂ ಮಾಜಿ ಅಧ್ಯಕ್ಷ ವಿ.ಆರ್.ಭಾಸ್ಕರ್, ತಾಪಂ ಮಾಜಿ ಉಪಾಧ್ಯಕ್ಷ ಚಲಪತಿ, ಹೊನ್ನಾಪುರ ದೀಪಕ್, ಎಸ್‍ಡಿಕೆ ವೆಂಕಟೇಶ್, ಮುಖಂಡರುಗಳಾದ ಶಾಮಿರ್, ತಿಮ್ಮರಾಜು, ಬಾಲಾಜಿ, ನ್ಯಾತಪ್ಪ, ಪಿ.ಕೃಷ್ಣಪ್ಪ, ಶ್ರೀನಿವಾಸ ಮತ್ತು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link