ಮಧುಗಿರಿ :
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗಡಿವಾಡಿ ಕಾರ್ಯಕರ್ತರು ಹಾಜರಾಗಿಲ್ಲವೆಂದು ಆರೋಪಿಸಿ, ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಕುಪಿತಗೊಂಡು, ಪಿಡಿಓರವರನ್ನು ಅಮಾನತ್ತು ಮಾಡುವಂತೆ ಇಓರವರಿಗೆ ಸೂಚಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಏನಿದು ಘಟನೆ..?:
ಶನಿವಾರ ಶಾಸಕ ವೀರಭದ್ರಯ್ಯನವರು ಐ.ಡಿ. ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಶಾಸಕರು ತೆರಳಿದಾಗ ಆಶಾ ಕಾರ್ಯಕರ್ತೆಯರು ಸ್ಥಳದಲ್ಲಿ ಇಲ್ಲದಿದ್ದಾಗ ಕುಪಿತಗೊಂಡ ಶಾಸಕರು, ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇಲ್ಲವೆಂದು ಪಿಡಿಓ ಮಂಜುನಾಥ್ ಅವರನ್ನು ಏಕವಚನದಲ್ಲಿ ತೀವ್ರ ತರಾಟಗೆ ತೆಗೆದುಕೊಂಡಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್ ನೀಡಲಾಗಿದೆ.
ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಆಶಾ ಕಾರ್ಯಕರ್ತೆಯರು ಬೇರೆ ಕಡೆ ಕೋವಿಡ್ ಕರ್ತವ್ಯದಲ್ಲಿ ಭಾಗಿಯಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಗ್ರಾಪಂ ಸದಸ್ಯರಿಗೆ ಪ್ರಜ್ಞೆ ಇಲ್ಲವೆ? ಖಾಲಿ ಕುರ್ಚಿಗಳನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತೀಯ? ಏನ್ ತಿಳಿದು ಕೊಂಡಿದ್ದೀಯ? ಮಾನ ಮರ್ಯಾದೆ ಇದೆಯ? ಬಾಯಿ ಮುಚ್ಚು ಸಾಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಪಿಡಿಓರವರನ್ನು ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಧುಗಿರಿ ತಾಲ್ಲೂಕು ವಿಧಾನ ಸಭಾಕ್ಷೇತ್ರದ 33 ಗ್ರಾಪಂಗಳ ಪೈಕಿ 29 ಗ್ರಾಪಂಗಳು ಕಾಂಗ್ರೆಸ್ ಬೆಂಬಲಿಗರ ವಶದಲ್ಲಿವೆ. ಬಹುತೇಹ ಕಡೆ ಶಾಸಕರ ಈ ನಡೆಯನ್ನು ಖಂಡಿಸಿ ಗ್ರಾಪಂ ಸದಸ್ಯರೆ ಅವರವರ ಗ್ರಾಪಂಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳೆ ಕಿಟ್ ವಿತರಿಸಿದ್ದಾರೆ.
ಪ್ರಸ್ತುತ ಶಾಸಕರು ಅದೇ ಗ್ರಾಪಂಯಿಂದ ಗ್ರಾಪಂ ಅನುದಾನದಲ್ಲಿ ಮತ್ತೆ ಕಿಟ್ ವಿತರಣೆ ಮಾಡಲು ಹೊರಟಿರುವುದು, ಗ್ರಾಪಂ ಅಧ್ಯಕ್ಷರ ಮತ್ತು ಉಪಾಧ್ಯಕ್ಷರುಗಳ ಕೋಪಕ್ಕೆ ಕಾರಣವಾಗಿದೆ. ಕೆಲ ಗ್ರಾಪಂಗಳಲ್ಲಿ ಶಾಸಕರ ಅನುದಾನದಲ್ಲಿ ಏನು ಬೇಕಾದರೂ ಅಭಿವೃದ್ಧಿ ಮಾಡಲಿ, ಆದರೆ ನಮ್ಮ ಗ್ರಾಪಂ ವತಿಯಿಂದ ಕಿಟ್ ವಿತರಣೆ ಮಾಡಲು ಬಂದರೆ ಇದು ಯಾವ ನ್ಯಾಯ ಎಂಬುದು ಗ್ರಾಪಂ ಅಧ್ಯಕ್ಷರುಗಳ ಆರೋಪವಾಗಿದೆ.
ಯಾರಿಗೂ ಮಾಹಿತಿ ಇಲ್ಲದೆ ಏಕಾಏಕಿ ಬಂದು ಪಿಡಿಓ ಅವರನ್ನು ಸಸ್ಪೆಂಡ್ ಮಾಡಿ ಅಂದರೆ ಹೇಗೆ? ಶಾಸಕರು ಭೇಟಿ ನೀಡುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ, ಶಾಸಕರಾಗಿ ಮೂರು ವರ್ಷ ಕಳೆದಿದ್ದರೂ ಇದುವರೆಗೂ ಶಾಸಕರು ಈ ಭಾಗಕ್ಕೆ ಬಂದಿಲ್ಲ. ಕೊರೊನಾ ಸಂದರ್ಭದಲ್ಲಿ ಅನೇಕ ಸಾವು-ನೋವು ಸಂಭವಿಸಿವೆ. ಕೇವಲ ಅಧಿಕಾರಿಗಳೊಂದಿಗೆ ಎರಡು ಮೂರು ಸಭೆ ನಡೆಸಿದ್ದಾರೆ ಹೊರತು, ಗ್ರಾಮಗಳಿಗೆ ಸರಿಯಾಗಿ ಭೇಟಿ ನೀಡಿಲ್ಲ. ಜನರ ಕಷ್ಟ ಆಲಿಸಿಲ್ಲ. ಇದೀಗ ಬಂದು ಗ್ರಾಪಂ ಅನುದಾನದಲ್ಲಿ ಕಿಟ್ ಕೊಡಲು ಇವರೆ ಬೇಕೆ ಎಂಬ ಆರೋಪಗಳು ಗ್ರಾಮ ಪಂಚಾಯತಿ ಸದಸ್ಯರುಗಳಿಂದಲೆ ಕೇಳಿ ಬಂದಿವೆ. ಶಾಸಕರ ಈ ನಡೆಗೆ ಗ್ರಾಮಸ್ಥರಿಂದಲೂ ಬೇಸರ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ತಾಪಂ ಇಓ ದೊಡ್ಡಸಿದ್ದಪ್ಪ, ಟಿಹೆಚ್‍ಓ ರಮೇಶ್‍ಬಾಬು, ತಹಸೀಲ್ದಾರ್ ವೈ ರವಿ, ಪಿಡಿಓ ಮಂಜುನಾಥ್ ಹಾಗೂ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ