ಸಮಸ್ಯೆಗಳ ಆಗರವಾದ- ಚಿನ್ನಗಿರಿ ಪಾಳ್ಯ !

ಬ್ಯಾಲ್ಯ :

     ಮಧುಗಿರಿ ತಾಲ್ಲೂಕು ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕಿನ ಗಡಿ ಗ್ರಾಮ ಚಿನ್ನಗಿರಿ ಪಾಳ್ಯ ತೀರಾ ನಿರ್ಲಕ್ಷಿತ ಗ್ರಾಮ. 120 ಮನೆಗಳಿದ್ದು, ಸುಮಾರು 800 ಜನ ಸಂಖ್ಯೆಯ ಈ ಗ್ರಾಮದ ತುಂಬಾ ಕೃಷಿಕರೆ ಇದ್ದಾರೆ. ಕುರುಬ ಜನಾಂಗ ಮತ್ತು ತಿಗಳ ಜನಾಂಗದವರು ಈ ಊರಿನಲ್ಲಿದ್ದು, ಕೃಷಿ ಮತ್ತು ಕೃಷಿಗೆ ಪೂರಕವಾದ ಕುರಿ ಮೇಕೆ ಸಾಕಣೆಯಿಂದ ಜೀವನ ಸಾಗಿಸುತ್ತಾರೆ.

      ಮುಖ್ಯ ರಸ್ತೆಯಿಂದ ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆಯು ಇದುವರೆಗೂ ಕಾಮಗಾರಿ ಭಾಗ್ಯವನ್ನು ಕಂಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ಇಡೀ ರಸ್ತೆ ಜಲಾವೃತವಾಗಿ, ಕೆಸರು ತುಂಬಿಕೊಂಡು ಗ್ರಾಮಸ್ಥರಿಗೆ ದಿಗ್ಬಂಧನ ವಿಧಿಸಿತ್ತು. ಮಳೆ ಬಂದು ನಿಂತ ಒಂದು ವಾರದ ನಂತರ “ಪ್ರಜಾ ಪ್ರಗತಿಯು’’ ಗ್ರಾಮಕ್ಕೆ ಭೇಟಿ ನೀಡಿದಾಗಲೂ ರಸ್ತೆ ತುಂಬಾ ನೀರು ತುಂಬಿಕೊಂಡು ಹೊಂಡವಾಗಿಯೇ ಇತ್ತು. ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಕೊಳಚೆ ಮತ್ತು ಮಳೆ ನೀರು ಸೇರಿಕೊಂಡು ಗ್ರಾಮದ ತುಂಬಾ ವಾಸನಾಯುಕ್ತ ರಾಡಿ ತುಂಬಿದೆ. ಅಲ್ಲಲ್ಲಿ ಶಿಥಿಲಾವಸ್ಥೆಯ ಚರಂಡಿಗಳಿವೆ, ಬಹಳಷ್ಟು ಕಡೆ ಚರಂಡಿಗಳಾಗಬೇಕಿದೆ. ಇಷ್ಟೆಲ್ಲ ಕಷ್ಟ ಪಡುತ್ತಿದ್ದರೂ ನಮ್ಮತ್ತ ಯಾರೂ ತಿರುಗಿ ನೋಡಿಲ್ಲ, ಗ್ರಾಮದ ಎಲ್ಲ ರಸ್ತೆಗಳೂ ಸಿ.ಸಿ ರಸ್ತೆಗಳಾಗಬೇಕು ಮತ್ತು ಚರಂಡಿ ವ್ಯವಸ್ಥೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

      ಇನ್ನು ಬಸ್ ಸೌಲಭ್ಯವಿಲ್ಲದೆ ಗ್ರಾಮದ ಯುವಕ ಯುವತಿಯರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಸುಮಾರು ಆರು ಕಿ.ಮೀ ದೂರ ನಡೆದು, ಬಸ್ ಹತ್ತ ಬೇಕಿರುವುದರಿಂದ ಜನತೆ ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋಗಬೇಕೆಂದರೆ ಆರು ಕಿ.ಮೀ ದೂರದ ಬ್ಯಾಲ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಇನ್ನು ಮಹಿಳೆಯರ ಹೆರಿಗೆ ಸಮಯದಲ್ಲಂತೂ ತುರ್ತು ವಾಹನ ಸೌಲಭ್ಯವಿಲ್ಲದೆ ಎಷ್ಟೋ ಗರ್ಭಿಣಿಯರು ಅಸು ನೀಗಿದ ಪ್ರಸಂಗಗಳೂ ಉಂಟು. ವೃದ್ದರಿಗಂತೂ ಮೆಡಿಕಲ್ ಶಾಪಿನ ಮಾತ್ರೆಗಳೇ ಗತಿ. ಆದ್ದರಿಂದ ಗ್ರಾಮದಲ್ಲೊಂದು ಆರೋಗ್ಯ ಕೇಂದ್ರ ತೆರೆದರೆ ನವಿಲಡಕು, ಬಟ್ಟಗೆರೆ, ಕುಲುಮೇನ ಹಳ್ಳಿ ಜನತೆಗೆ ಆರೋಗ್ಯ ಸೌಲಭ್ಯಗಳು ದೊರೆಯುತ್ತವೆ ಎಮಬುದು ಗ್ರಾಮಸ್ಥರು ಮನವಿಯಾಗಿದೆ.

ಗ್ರಾಮದಲ್ಲಿ ಸ.ಕಿ.ಪ್ರಾ. ಪಾಠಶಾಲೆ ಇದೆ. ಅಲ್ಲಿಗೆ ರಸ್ತೆ ಸರಿಯಿಲ್ಲ, ವಿದ್ಯುತ್ ಸಂಪರ್ಕವಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಇತ್ತ ಕಡೆ ಯಾರೂ ಗಮನ ಹರಿಸಿಲ್ಲ. ಮೇಲೆ ತಿಳಿಸಿರುವ ನಾಲ್ಕೂ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳು ಬಹಳ ಅಂತರದಲ್ಲಿವೆ. ಹಾಗಾಗಿ ಗ್ರಾಮದಲ್ಲೊಂದು ಓವರ್ ಹೆಡ್ ಟ್ಯಾಂಕ್, ‘ಶುದ್ದ ನೀರಿನ ಘಟಕ’ದ ಅವಶ್ಯಕತೆಯನ್ನೂ ಗ್ರಾಮದ ಮಹಿಳೆಯರು ಒತ್ತಿ ಹೇಳುತ್ತಾರೆ.

      ಸರ್ಕಾರ ನೀಡಿರುವ ನಿವೇಶನಗಳಲ್ಲಿನ ತಿಪ್ಪೆ ಗುಂಡಿಗಳನ್ನು ಮತ್ತು ಗ್ರಾಮದಲ್ಲಿರುವ ಹಳೆಯ ಮರಗಳನ್ನು ತೆರವು ಗೊಳಿಸುವತ್ತ ಗ್ರಾಮ ಪಂಚಾಯ್ತಿ ಗಮನ ಹರಿಸಬೇಕಿದೆ. ಇತ್ತೀಚೆಗೆ ಬಿದ್ದ ಮರವೊಂದರಿಂದ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ತಕ್ಷಣ ಗ್ರಾಮದಲ್ಲಿರುವ ಹಳೆಯ ಮರಗಳನ್ನು ತೆರವುಗೊಳಿಸಲು ಪಂಚಾಯತಿಯವರು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

      ಗ್ರಾಮದಲ್ಲಿ ಇಷ್ಟೆಲ್ಲ ಅನನುಕೂಲಗಳಿದ್ದರೂ, ಪದೇ ಪದೇ ಮನವಿ ಮಾಡಿಕೊಂಡರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಸಮಸ್ಯೆಗಳನ್ನು ಬಗೆ ಹರಿಸಿಕೊಡದಿದ್ದರೆ ಕೊಂಡವಾಡಿ ಗ್ರಾಮ ಪಂಚಾಯಿತಿ ಮುಂದೆ ಧರಣಿ ಕೂರಲಾಗುವುದೆಂದು ಚಿನ್ನಗಿರಿ ಪಾಳ್ಯದ ಗ್ರಾಮಸ್ಥರು ಎಚ್ಚರಿಸಿದ್ದಾರೆ.

      ಕೊಂಡವಾಡಿ ಗ್ರಾ.ಪಂ. ಉಪಾಧ್ಯಕ್ಷರಾದ ಸಾಕಮ್ಮ ಸಣ್ಣಮೈಲಾರಪ್ಪ, ಮಾಜಿ ಗ್ರಾ.ಪಂ ಸದಸ್ಯರೂ, ಪಂ.ಮಟ್ಟದ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆದ ಬಿ.ಎಂ ಗಂಗಾಧರಯ್ಯ, ಗ್ರಾಮಸ್ಥರಾದ ಮೋಹನ್, ಕುಮಾರ್, ನಾಗೇಂದ್ರ, ಸುನಿಲ್, ನಾಗರಾಜು, ಮಾಲೂರಪ್ಪ, ವಿ.ತಿಮ್ಮಯ್ಯ, ಕಾವಲ್ಲಪ್ಪ, ಕಲ್ಪನಾ, ಗಿರಿಜಮ್ಮ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap