ಮಧುಗಿರಿ : 
ಐತಿಹಾಸಿಕ ಶ್ರೀ ದಂಡಿನ ಮಾರಮ್ಮನ ಜಾತ್ರೆಯ ಪ್ರಯುಕ್ತ ನಡೆಯುವ ದನಗಳ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ರೈತರ ದಂಡೆ ಹರಿದು ಬರುತ್ತಿದೆ.
ಶಿವರಾತ್ರಿ ಹಬ್ಬದ ನಂತರ ತುಮಕೂರಿನ ಸಿದ್ಧಗಂಗಾ ಜಾತ್ರೆ ಮುಗಿಯುತ್ತಿದ್ದಂತೆ, ಮಾರ್ಚ್ 23 ರಿಂದ ಏಪ್ರಿಲ್ 2ರವರೆಗೂ ಈ ಜಾತ್ರೆ ನಡೆಯಲಿದ್ದು, ತಾಲ್ಲೂಕು ಆಡಳಿತದಿಂದ ದೊರೆಯ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಲಾಗುತ್ತಿದೆ. ಜಾತ್ರೆಯಲ್ಲಿ ವಿವಿಧ ತಳಿಯ ಹೋರಿಗಳನ್ನು ವ್ಯಾಪಾರಕ್ಕಾಗಿ ಪ್ರದರ್ಶಿಸುತ್ತಾರೆ. ಬಿಸಿಲಿನ ಬೇಗೆಯು ತೀವ್ರವಾಗುತ್ತಿರುವುದರಿಂದ ರಕ್ಷಣೆಗಾಗಿ ಚಪ್ಪರ, ಶಾಮಿಯಾನ ಹಾಕಿಕೊಂಡು ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ರೈತರೆ ಮಾಡಿಕೊಳ್ಳುತ್ತಿದ್ದಾರೆ. ಹೋಟೆಲ್, ಚಿಲ್ಲರೆ ಅಂಗಡಿಗಳು, ಬಿಸಿಲಿನ ತಾಪ ತಣಿಸಲು ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣು, ಜ್ಯೂಸ್ ಅಂಗಡಿಗಳನ್ನು ದನಗಳ ಜಾತ್ರೆಯಲ್ಲಿ ಕಾಣಬಹುದಾಗಿದೆ.
ಜಾತ್ರಾ ಆಡಳಿತ ಮಂಡಳಿಯಿಂದ ದನಗಳಿಗೆ ನೀರು ಕುಡಿಯಲು ಅಲ್ಲಲ್ಲಿ ತೊಟ್ಟಿಗಳು, ಪಶು ಆಸ್ಪತ್ರೆ ಹಾಗೂ ರಕ್ಷಣೆಗಾಗಿ ಪೆÇಲೀಸ್, ರಾತ್ರಿ ವೇಳೆ ಬೆಳಕಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಪಶು ಆಸ್ಪತ್ರೆ :

ಇಡೀ ದಿನ ಪೂರ್ತಿ ಪಶು ಆಸ್ಪತ್ರೆಯನ್ನು ತೆರೆದಿದ್ದು, ಕಾಲುಬಾಯಿ ಜ್ವರ ಮತ್ತು ಇತರೆ ರೋಗಗಳ ಚಿಕಿತ್ಸೆಗಾಗಿ ಔಷಧಿಗಳನ್ನು ಸಿದ್ಧಪಡಿಸಿದ್ದು, ಪ್ರತ್ಯೇಕವಾದಂತಹ ಕೌಂಟರ್ ಸಹ ತೆರೆಯಲಾಗಿದೆ. ಈಗಾಗಲೇ ಜಾತ್ರೆಗೆ ಬಂದಿರುವ 128 ಪಶುಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.
ಈ ಜಾತ್ರೆಯಲ್ಲಿ ಪ್ರದರ್ಶನಕ್ಕೆ ಒಳಪಟ್ಟಿರುವ ನಾಲ್ಕು ಹಲ್ಲು ಮತ್ತು ಆರು ಹಲ್ಲು ದನಗಳು ಕನಿಷ್ಠ ಇಪ್ಪತ್ತೈದು ಸಾವಿರ ರೂ.ಗಳಿಂದ ಹಿಡಿದು ಗರಿಷ್ಠ ಎರಡೂವರೆ ಲಕ್ಷ ರೂ. ವರೆವಿಗೂ ಮಾರಾಟಕ್ಕೆ ಲಭ್ಯವಿವೆ. ಜಾತ್ರೆಯಲ್ಲಿ ದನಗಳಿಗೆ ಸುಂಕ ವಸೂಲಿ ಇಲ್ಲವಾಗಿದೆ. ದನಗಳ ವ್ಯಾಪಾರಕ್ಕಾಗಿ ಉತ್ತರ ಕರ್ನಾಟಕ ಭಾಗದ ಹಾವೇರಿ, ಗದಗ ಅಲ್ಲದೆ ಪಕ್ಕದ ಆಂಧ್ರದವರು ಸಹ ಬಂದಿದ್ದಾರೆ. ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನಗಳ ಸಾಗಾಟದ ಖರ್ಚು-ವೆಚ್ಚವೂ ಏರಿಕೆಯಾಗಿದ್ದು, ದನಗಳ ಸಾಗಾಟವು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಜಾತ್ರೆಯ ನೆಲವಳಿ ಸುಂಕವು ಈ ಬಾರಿ 11.50 ಲಕ್ಷಕ್ಕೆ ಏರಿಕೆ ಕಂಡಿದ್ದು, ಜಾತ್ರೆಯಲ್ಲಿ ಭಾಗವಹಿಸುವ ಅಂಗಡಿಗಳಿಂದ ಮತ್ತು ಮನರಂಜನಾ ಕಾರ್ಯಕ್ರಮ ನೀಡುವವರಿಂದ ಈ ಹಣವು ವಸೂಲಿ ಆಗಲಿದೆ.
ಜಮಾ – ಖರ್ಚು :
ದೇವಸ್ಥಾನವು ಸರ್ಕಾರಕ್ಕೆ ಸೇರಿದ ನಂತರ ಕಳೆದ 3 ವರ್ಷಗಳಿಂದ ಜಾತ್ರೆಯ ಯಾವುದೇ ಜಮಾ ಖರ್ಚು ಮಾಡುತ್ತಿಲ್ಲವೆಂದು ಪುರಸಭಾ ಮಾಜಿ ಅಧ್ಯಕ್ಷ ಡಿ. ಜಿ. ಶಂಕರನಾರಾಯಣಶೆಟ್ಟಿ ಪೂರ್ವಸಿದ್ಧತಾ ಸಭೆಯಲ್ಲಿ ಆರೋಪಿಸಿದ್ದರು. ಭಕ್ತರು ಕೂಡ ಪಾರದರ್ಶಕವಾಗಿ ಜಮಾ ಖರ್ಚು ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







