ಗರಣಿ ಗ್ರಾಪಂ : ಕಾಮಗಾರಿಗೆ ಮಾನವ ಸಂಪನ್ಮೂಲ ಬಳಕೆ

 ಮಧುಗಿರಿ :

      ನಮ್ಮ ಗ್ರಾಪಂ ಎ ಗ್ರೇಡ್ ಪಂಚಾಯತಿಯಾಗಿದ್ದು, ಯಾವುದೇ ಕಾಮಗಾರಿಗಳಲ್ಲಿ ಜೆಸಿಬಿ ಯಂತ್ರ ಬಳಸಿಲ್ಲ. ಎಲ್ಲಾ ಕಾಮಗಾರಿಗಳನ್ನು ಮಾನವ ಸಂಪನ್ಮೂಲ ಬಳಸಿ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಇಂದೂ ಎಲ್ ಎನ್ ರೆಡ್ಡಿ ತಿಳಿಸಿದರು.

      ಸೋಮವಾರ ಗ್ರಾಪಂ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಗರಣಿ ಗ್ರಾಪಂ ವ್ಯಾಪ್ತಿಯಲ್ಲಿ 2020-21ನೆ ಸಾಲಿನಲ್ಲಿ ನಡೆದಿರುವ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಯಾವುದೇ ಯಂತ್ರೋಪಕರಣ ಬಳಸದೆ ಕೂಲಿ ಕಾರ್ಮಿಕರನ್ನು ಬಳಸಿ ಕೆಲಸ ಮಾಡಲಾಗಿದೆ. ಪಕ್ಷಭೇದ ಮರೆತು ಇಲ್ಲಿಯವರೆಗೂ 19,000 ಕೂಲಿ ಕಾರ್ಮಿಕರನ್ನು ಬಳಸಿ 400 ಕೆಲಸಗಳನ್ನು 39 ಲಕ್ಷ ರೂ. ವೆಚ್ಚದಲ್ಲಿ ಪ್ರಗತಿ ಸಾಧಿಸಲಾಗಿದೆ. ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್, ಕೊಟ್ಟಿಗೆಗಳು, ಜಮೀನುಗಳಲ್ಲಿ ಬದು ನಿರ್ಮಾಣ, ಅಂತರ್ಜಲ ವೃದ್ದಿಸುವ ಕಾಮಗಾರಿಗಳು, ಸಿಸಿ ರಸ್ತೆ, ಚರಂಡಿಗಳು ಶಾಲಾ ಆವರಣದಲ್ಲಿ ಪರಿಸರ ರಕ್ಷಿಸುವ ಉದ್ದೇಶದಿಂದ ಸಸಿ ನೆಡುವ ಕಾಮಗಾರಿಗಳನ್ನು ಮಾಡಿದ್ದೇವೆ.

      ನಮ್ಮ ಆಡಳಿತ ಅವಧಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದು, ನಮ್ಮ ಆಡಳಿತದ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಇಲ್ಲಸಲ್ಲದ ಆರೋಪ ಮಾಡುವ ಬದಲು ಮಾಹಿತಿ ಹಕ್ಕಿನಡಿ ದಾಖಲೆ ಪಡೆದು ಯಾರು ಬೇಕಾದರೂ ಪರಿಶೀಲಿಸಬಹುದು. ನಮ್ಮ ಆಡಳಿತ ತೆರೆದ ಕನ್ನಡಿಯಂತಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಬೆಂಬಲದಿಂದ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಯಾವುದೇ ಲೋಪ ಎಸಗದೆ ಕಾಮಗಾರಿಗಳನ್ನು ಮಾಡಿದ್ದೇವೆ. ಗರಣಿ ಗ್ರಾಪಂ ವ್ಯಾಪ್ತಿಗೆ 16 ಗ್ರಾಮಗಳು ಒಳಪಟ್ಟಿದ್ದು, ಬಹುತೇಕ ಹಿಂದುಳಿದ ವರ್ಗದವರು, ಬಡವರು, ರೈತರು ವಾಸಿಸುತ್ತಿದ್ದು, ಪ್ರತಿ ಮನೆಗೂ ತೆರಳಿ ಕಾಮಗಾರಿಗಳನ್ನು ವೈಯಕ್ತಿಕವಾಗಿ ಹಾಗೂ ಸಮುದಾಯದ ಕೆಲಸಗಳನ್ನೂ ಮಾಡಿಸಲಾಗಿದೆ. ಆದರೆ ಹಿಂದಿನ ಅವಧಿಯ ಕೆಲವು ಕಾಮಗಾರಿಗಳು ಅರೆಬರೆಯಾಗಿದ್ದು ತನಿಖಾ ಹಂತದಲ್ಲಿವೆ ಎಂದರು.

      ಗ್ರಾಪಂ ಸದಸ್ಯ ತಿಮ್ಮರಾಜು ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆ ಇಲ್ಲದಿದ್ದರೆ ಬೆಂಗಳೂರಿನಿಂದ ಗ್ರಾಮಗಳಿಗೆ ವಾಪಸ್ಸಾದ ಯುವಕರಿಗೆ ಕೆಲಸವೆ ಇರುತ್ತಿರಲಿಲ್ಲ. ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದವು. 2005 ರಲ್ಲಿ ಜಾರಿಯಾದ ನರೇಗಾ ಯೋಜನೆಯಿಂದ ಎಷ್ಟೋ ಸಹಕಾರಿಯಾಗಿದೆ. ನನ್ನ ಕ್ಷೇತ್ರವಾದ ಹೊಸಕೋಟೆಯಲ್ಲಿ ತಾಯಿ ಮೃತಪಟ್ಟಾಗ ಮನೆ ಇಲ್ಲದ ಕಾರಣ ಬೀದಿ ಬದಿಯಲ್ಲಿ ದೀಪ ಇಟ್ಟಾಗ, ಸಂಬಂಧಿಕರು ಮನೆಯೂ ಸಹ ಇಲ್ಲವೆ ಎಂದು ಮಾತನಾಡಿದ್ದನ್ನು ಕಂಡು, ಗ್ರಾಪಂ ವತಿಯಿಂದ ಕೊಟ್ಟಿಗೆ ನಿರ್ಮಾಣ ಮಾಡಿಸಿದ್ದರಿಂದ ತಿಥಿ ಕಾರ್ಯ ನಡೆಸಲು ಸಾಧ್ಯವಾಯಿತು ಎಂದು ಯೋಜನೆಯ ಮಹತ್ವ ತಿಳಿಸಿದರು.

      ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸಿದ್ದಗಂಗಮ್ಮ, ಗುರುಮೂರ್ತಿ, ಗ್ರಾಪಂ ಸದಸ್ಯರುಗಳಾದ ಗರಣಿ ರಮೇಶ್, ಶಂಕರರಾಜು, ತಿಮ್ಮರಾಜು, ರಾಜಣ್ಣ, ಗೋವಿಂದರಾಜು, ಪುಲುಮಾಚಿ ರಮೇಶ್, ಕುಸುಮಾ ಕುಮಾರಿ, ನರಸಿಂಹಮೂರ್ತಿ, ಶಿಲ್ಪ ರಾಜಣ್ಣ, ನಾಗರತ್ನಮ್ಮ, ಶಿವಣ್ಣ, ನಾರಾಯಣಪ್ಪ, ಶಾರದಮ್ಮ ಶಿವರಾಜ್, ನರಸೇಗೌಡ, ದೀಪಾ ವೈ. ರಾಜಣ್ಣ, ಜಯಮ್ಮ, ರಂಗಶ್ಯಾಮಯ್ಯ, ಮುದ್ದಮ್ಮ, ನರಸಿಂಹಮೂರ್ತಿ, ಗ್ರಾಮಸ್ಥರಾದ ಚಿತ್ತಯ್ಯ, ಮೂರ್ತಿ, ಈರಣ್ಣ, ಹೊಸಕೋಟೆ ರಾಜು ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap