ಮಧುಗಿರಿ : ತಿಂಗಳಿಂದ ಚರಂಡಿ ಪಾಲಾಗುತ್ತಿರುವ ಹೇಮೆ ನೀರು

ಮಧುಗಿರಿ :

      ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಹೇಮಾವತಿ ನೀರಿನ ಪೈಪ್‍ಲೈನ್ ಒಡೆದು ಕಳೆದೊಂದು ತಿಂಗಳಿಂದ ನೀರು ಚರಂಡಿ ಪಾಲಾಗುತ್ತಿದೆ. ಇದನ್ನು ರಿಪೇರಿ ಮಾಡಿಸುವ ಗೋಜಿಗೆ ಪುರಸಭೆ ಆಡಳಿತ ಹೋಗಿಲ್ಲದ ಕಾರಣ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

      ಸಿದ್ಧಾಪುರ ಗೇಟ್ ಬಳಿಯ ಸಮೀಪ ಪೈಪ್ ಲೈನ್ ಒಡೆದು ಹೋಗಿ ಸುಮಾರು 1 ಕಿಲೋಮೀಟರ್ ನಷ್ಟು ದೂರ ನೀರು ಪೋಲಾಗುತ್ತಿದೆ. ಈ ನೀರಿನಿಂದ ರಸ್ತೆ ಹಾಳಾಗುತ್ತದೆ ಎಂಬ ದೃಷ್ಟಿಯಿಂದ ಈ ನೀರನ್ನು ಚರಂಡಿಗೆ ಹರಿಬಿಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದ್ದು ಪೈಪ್ ಲೈನ್ ಒಡೆದು ಹೋಗಿರುವ ಜಾಗ ಒಂದೆಡೆಯಾದರೆ ನಾಮಕಾವಸ್ಥೆಗೆ ಮತ್ತೊಂದೆಡೆ ರಿಪೇರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

      ಕಳೆದ ವರ್ಷ ಹೇಮಾವತಿ ನೀರನ್ನು ಸಿದ್ದಾಪುರದ ಕೆರೆಗೆ ಹರಿಸಲು ಸಂಸದರಾದ ಜಿ ಎಸ್.ಬಸವರಾಜು ಹಾಗೂ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷ ಆರ್.ರಾಜೇಂದ್ರ ರವರು ಮುತುವರ್ಜಿ ವಹಿಸಿ ಕೆಟ್ಟನಿಂತಿದ್ದ ಮೋಟಾರ್ ಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುಮಕೂರಿನ ಬಳಿಯಿರುವ ಪಂಪ್ ಹೌಸ್‍ಗೆ ಭೇಟಿ ನೀಡಿ ಪಟ್ಟಣಕ್ಕೆ ಹೇಮಾವತಿ ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸರಕಾರದ ಲಕ್ಷಾಂತರ ರೂ ಖರ್ಚು ಮಾಡಿ ಸಿದ್ದಾಪುರ ಕೆರೆಗೆ ಪೈಪ್ ಲೈನ್ ಮೂಲಕ ನೀರು ಹರಿಸುತ್ತಿದ್ದು ಈ ಬಗ್ಗೆ ರಾಜಕೀಯ ಜಟಾಪಟಿಗಳು ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ.

      ಪುರಸಭಾ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಈ ನೀರನ್ನು ಬಿಡುತ್ತಿದ್ದಾರೆ ನೀರಿದ್ದರೂ ನೀರಿನ ಕೃತಕ ಸಮಸ್ಯೆ ಉದ್ಭವವಾಗಿದ್ದು ನೀರಿನ ಟ್ಯಾಂಕರ್‍ಗಳ ಹಾವಳಿ ಹೆಚ್ಚಾಗುವಂತಹ ವಾತವರಣ ಕೆರೆಯಲ್ಲಿ ನೀರಿದ್ದರೂ ಸೃಷ್ಟಿಯಾಗಿದೆ. ಇನ್ನೂ ಕೆಲ ವಾಟರ್ ಮ್ಯಾನ್‍ಗಳಂತು ಪುರಸಭೆಯ ಕೊಳವೆಬಾವಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆಂದು ಹಾಗೂ ವಾಟರ್‍ಮೆನ್‍ಗಳ ವಿರುದ್ಧವು ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆ ಈ ಪೈಪ್ ಲೈನ್ ನಿಂದ ಪೋಲಾಗುತ್ತಿರುವ ನೀರನ್ನು ಸರಿಪಡಿಸಿ ನಾಗರಿಕರ ಅನೂಕೂಲ ಮಾಡಿಕೊಡಬೇಕೆಂದು ಪಟ್ಟಣದ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap