ಮಧುಗಿರಿ :
ರಾಜ್ಯ ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಒತ್ತಾಯಿಸಿದರು.
ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೋನಾ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ ಬಹುತೇಕ ಯುವಕರು ಬೇಸಾಯವನ್ನು ಶ್ರದ್ಧೆಯಿಂದ ಮಾಡಿದ್ದು, ಸಕಾಲದಲ್ಲಿ ಮಳೆಯಾಗದೆ ಸಂಪೂರ್ಣ ಬೆಳೆ ನೆಲಕಚ್ಚಿದೆ. ವ್ಯವಸಾಯಕ್ಕೆ ಹಾಕಿದ ಬಂಡವಾಳವೂ ಹಿಂದಿರುಗದ ಚಿಂತಾಜನಕ ಪರಿಸ್ಥಿತಿ ತಲೆದೋರಿರುವುದರಿಂದ ತಕ್ಷಣವೆ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.
ಬೆಳೆ ನಷ್ಟ ಮತ್ತು ಬೆಳೆ ಪರಿಹಾರದ ಹಣವನ್ನು ಖಾಸಗಿ ಕಂಪನಿಯವರಿಗೆ ವಹಿಸುವವರು ಸರ್ಕಾರದ ಒಡೆತನದ ಇನ್ಶೂರೆನ್ಸ್ ಕಂಪನಿಗಳ ಮೂಲಕ ಹಣ ಸಂದಾಯ ಮಾಡಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ಹೋಮ್ ಇನ್ಶೂರೆನ್ಸ್ ಕಂಪನಿಯವರು ಹಣ ಕಟ್ಟಿಸಿಕೊಂಡು ವರವರರಾವ್ ಹೊರತು ಯಾರಿಗೂ ಮರುಪಾವತಿ ಮಾಡಿದ ಉದಾಹರಣೆಗಳಿಲ್ಲ.
ಗುಜರಾತಿನ ಖಾಸಗಿ ಇನ್ಶೂರೆನ್ಸ್ ಕಂಪನಿ ಅವರೊಬ್ಬರು ರೈತರಿಂದ ಸುಮಾರು 2ಸಾವಿರ ಕೋಟಿ ರೂ ಇನ್ಶೂರೆನ್ಸ್ ಹಣ ಕಟ್ಟಿಸಿಕೊಂಡಿದ್ದಾರೆ. ಬೆಳೆ ವಿಮೆ ರೈತರಿಗೆ ಸಕಾಲಕ್ಕೆ ಪಾವತಿಯಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ಇತ್ತೀಚೆಗೆ ಪೋಲೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಮಳೆ ಅಭಾವ ಇದೇ ರೀತಿ ಮುಂದುವರೆದರೆ ಬಹಳ ಸಂಕಷ್ಟ ಎದುರಾಗಲಿದೆ. ಸಂಬಂಧಪಟ್ಟ ಪಿಡಿಓಗಳು, ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಶೀಘ್ರ ಕ್ರಿಯಾಯೋಜನೆ ಸಲ್ಲಿಸಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಅಭಿನಂದನೆ :
ತಾಲ್ಲೂಕಿನ ಸಾಧಕಿ ಮೋನಿಕಾ ರವರು ಕೃಷಿ ವಿವಿಯಲ್ಲಿ ಹತ್ತು ಚಿನ್ನದ ಪದಕಗಳನ್ನು ಪಡೆದಿದ್ದು ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಈಕೆಯನ್ನು ಮತ್ತು ಈಕೆಗೆ ಶಿಕ್ಷಣ ಕೊಡಿಸಿದ ಪೋಷಕರನ್ನೂ ಅಭಿನಂದಿಸುತ್ತೇನೆ ಪುಟ್ಟ ಗ್ರಾಮದಿಂದ ಬಂದಂಥ ಈಕೆಯ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ