ಕೋಟೆ ಕಲ್ಲಪ್ಪ ದೇವರ ವಿಗ್ರಹ ಭಿನ್ನ : ಯುವಕನ ಬಂಧನ

ಮಧುಗಿರಿ :


     ತಾಲ್ಲೂಕಿನ ಕಸಬಾ ಹೋಬಳಿಯ ಹೊಸಹಳ್ಳಿ ವ್ಯಾಪ್ತಿಯ ಬೆಟ್ಟದ ಮೇಲಿರುವ ಶ್ರೀ ಕೋಟೆಕಲ್ಲಪ್ಪ ದೇವಸ್ಥಾನದ ಮೂಲ ವಿಗ್ರಹವನ್ನು ಯುವಕನೊಬ್ಬ ಚಪ್ಪಲಿ ಕಾಲಿನಿಂದ ತುಳಿದು ವಿಕೃತವಾಗಿ ವರ್ತಿಸಿ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಾರಣ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

     ದಬ್ಬೇಘಟ್ಟ ಗ್ರಾಮದ ಶ್ರೀಕಾಂತ(23) ಎನ್ನುವ ಯುವಕ ಈ ಕೃತ್ಯ ಎಸಗಿದ್ದು ಸೋಮವಾರ ಸಂಜೆ ಬೆಟ್ಟಕ್ಕೆ ತೆರಳಿ ಘಟನೆಯನ್ನು ಸ್ವತಃ ಚಿತ್ರೀಕರಿಸಿ ಫೇಸ್ ಬುಕ್ ವಾಟ್ಸ್ ಆ್ಯಪ್ ಮೂಲಕ ಮಂಗಳವಾರ ಬೆಳಗ್ಗೆ ಬಿತ್ತರಿಸಿದ್ದಾನೆ. ವೀಡಿಯೋ ತುಣುಕುಗಳನ್ನು ಭಕ್ತಸಮೂಹ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ನಂತರ ತುಂಗೋಟಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನೂರಾರು ಗ್ರಾಮಸ್ಥರು ಸಭೆ ಸೇರಿ ಶ್ರೀ ಕೊಟೆ ಕಲ್ಲಪ್ಪ ದೇವರಿಗೆ ಭಿನ್ನವಾಗಿರುವುದರಿಂದ ಪೂಜೆ ಮಾಡುವುದು ಬೇಡ, ಯುವಕ ಸಿಕ್ಕ ನಂತರ ತೀರ್ಮಾನ ಮಾಡೋಣ ಎಂದು ತೀರ್ಮಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರೊಬೆಶನರಿ ಡಿವೈಎಸ್ಪಿ ಮಂಜುನಾಥ, ಪಿಎಸ್ ಐ ಅಪಾರಧ ವಿಭಾಗ ಮಂಗಳಗೌರಮ್ಮ ಮತ್ತು ಪೊಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಸಂಜೆ ಹೊತ್ತಿಗಾಗಲೇ ಗ್ರಾಮದ ಯುವಕರು ಆರೋಪಿಯನ್ನು ಹಿಡಿದು ನಂತರ ಪೊಲಿಸರಿಗೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ.

ದೇವಾಲಯದ ಹಿನ್ನೆಲೆ :

     ಈ ಕೋಟೆಕಲ್ಲಪ್ಪ ದೇವರು ತುಂಗೋಟಿ ಗುಡಿಕಟ್ಟಿನ ಕುಂಚಿಟಿಗ ಒಕ್ಕಲಿಗರಲ್ಲಿನ ಒಳಕಲ್ಲಿನವರ ಹಾಗೂ ಪರಿಶಿಷ್ಟ ಸಮುದಾಯಗಳ ಆರಾಧ್ಯ ದೈವವಾಗಿದ್ದು, ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ.

     ಪ್ರಕೃತಿದತ್ತವಾಗಿಯೇ ಒಂದು ದೊಡ್ಡ ಬಂಡೆಯು ಪಶ್ಚಿಮದಿಂದ ಪೂರ್ವಕ್ಕೆ ಬಾಗಿದ್ದು, ಬಂಡೆಯ ಮೇಲೆ ಕಿರು ಗರ್ಭಗುಡಿ ಬಂಡೆ ಸಿಡಿದು ನಿರ್ಮಿತವಾಗಿದೆ. ಗರ್ಭಗುಡಿಗೆ ಛಾವಣಿ ನಿರ್ಮಿಸಿಲ್ಲ. ಇದು ಸ್ವಾಮಿ ಅಪ್ಪಣೆ ಎಂಬುದು ದಂತ ಕಥೆ. ಬಾಗಿರುವ ಬಂಡೆಯ ಉತ್ತರ ಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ ಸುಮಾರು 5.5 ಅಡಿ ಎತ್ತರದ ಬಾಗಿಲ ಚೌಕಟ್ಟು ಇಟ್ಟಿದ್ದಾರೆ. ಹಿಂದೆ ಇದಕ್ಕೆ ಆಲದ ಮರದ ಹಲಗೆಯ ಬಾಗಿಲನ್ನು ಇಟ್ಟಿದ್ದರಂತೆ. ಭಕ್ತಳೊಬ್ಬಳು ಗಂಡನ ಮನೆಯ ಕಿರುಕುಳ ತಾಳಲಾಗದೆ ದಬ್ಬೆಘಟ್ಟದಿಂದ ಇದೇ ಬೆಟ್ಟದ ಮಾರ್ಗವಾಗಿ ತನ್ನ ತವರೂರಾದ ತಾಯಗೊಂಡನಹಳ್ಳಿಗೆ ಹೋಗುತ್ತಿದ್ದಾಗ ಸ್ವಾಮಿ ಬಾಗಿಲು ಒದ್ದು ಆ ಭಕ್ತಳನ್ನು ಸಲಹಿ ಬುದ್ದಿ ಹೇಳಿ ತನ್ನ ಗಂಡನ ಮನೆಗೆ ಕಳುಹಿಸಿದರಂತೆ. ಆಗ ಒದ್ದ ಬಾಗಿಲು ಮಧುಗಿರಿ – ಶಿರಾ ರಸ್ತೆಯಲ್ಲಿರುವ ಬೆಟ್ಟದ ತಿಮ್ಮನಹಳ್ಳಿಯ ಈಗಿನ ಹರಿಹರಪುರದ ಹತ್ತಿರ ಬಿದ್ದು ಮರವಾಗಿ ಬೆಳೆದಿದೆ ಎಂಬ ನಂಬಿಕೆ ಇದ್ದು, ಈಗಲೂ ಅಲ್ಲಿ ಒಂದು ಆಲದ ಮರವನ್ನು ತೋರಿಸುತ್ತಾರೆ.

     ಗ್ರಾಮದವರು ಅಂದಿನಿಂದಲೂ ಬೆಟ್ಟದ ಮೇಲೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹರಿಸೇವೆ ಮಾಡುತ್ತಾರೆ. ಕೋಟೆ ಕಲ್ಲಪ್ಪನೆಂದು ಹೆಸರು ಬರಲು ಕಾರಣ ತಿಮ್ಮಪ್ಪ ನೆಲೆಸಿದ ಈ ಬೆಟ್ಟದ ಮೇಲೆ ಕೋಟೆ ಇದೆ. ಈಗ ಅದು ಶಿಥಿಲವಾಗಿದ್ದು, ಕೋಟೆಯ ಗೋಡೆಗಳ ಅವಶೇಷವನ್ನು ನಾವು ಈಗಲೂ ನೋಡಬಹುದು. ಈ ದೇವಸ್ಥಾನವು ಬೆಟ್ಟದಲ್ಲಿರುವ ಕೋಟೆಗೆ ಹೊಂದಿಕೊಂಡು ಕಲ್ಲು ಬಂಡೆಗಳ ಮಧ್ಯೆ ನೆಲೆಸಿರುವುದರಿಂದ ಕೋಟೆ ಕಲ್ಲಪ್ಪ ಸ್ವಾಮಿ ಎಂಬ ಹೆಸರಿನಲ್ಲಿ ಪ್ರಸಿದ್ದಿ ಪಡೆದು ಭಕ್ತರನ್ನು ಸಲಹುತ್ತಿದ್ದಾನೆ. ಅದೇ ರೀತಿ ತುಂಗೋಟಿಯಲ್ಲಿರುವ ರಂಗನಾಥಸ್ವಾಮಿಗೆ ತುಂಗೋಟಪ್ಪ ಎಂದು ಕರೆಯುವುದುಂಟು. ಗ್ರಾಮಸ್ಥರು ತಮ್ಮ ಮಕ್ಕಳಿಗೆ ತುಂಗೋಟಪ್ಪ, ಕೋಟೆಕಲ್ಲಪ್ಪ ಎಂಬ ಹೆಸರುಗಳನ್ನು ದೇವಾಲಯದ ಸುತ್ತ ಮುತ್ತಲ ಗ್ರಾಮಗಳಲ್ಲಿ ಇಟ್ಟಿರುವುದನ್ನು ಕಾಣಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap