ಮಿಡಿಗೇಶಿ :
ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯುತ್ತಿರುವಂತಹ ಕಳ್ಳತನ ಪ್ರಕರಣಗಳು ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲೂ ಪ್ರಾರಂಭವಾಗಿವೆ. ಇದರಿಂದ ಗ್ರಾಮೀಣ ಜನ ಸಾಮಾನ್ಯರು ಭಯ ಭೀತಿಗೊಂಡಿರುವ ಪ್ರಸಂಗಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಿಸಿ, ಪೋಲೀಸ್ ಇಲಾಖೆ ತುರ್ತಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
ಫೆ.28ರ ಭಾನುವಾರ ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ, ಮಿಡಿಗೇಶಿ ಗ್ರಾಪಂ ವ್ಯಾಪ್ತಿಯ ನೀಲಿಹಳ್ಳಿ ಗ್ರಾಮದ ಹನುಮಕ್ಕ ಕೋಂ ತಿಮ್ಮಣ್ಣ ಎನ್ನುವವರು ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿದ್ದಾಗ, ಪಲ್ಸರ್ ಬೈಕ್‍ನಲ್ಲಿ ಇಬ್ಬರು ಆಗಂತುಕರು ಬಂದು, ಗುಟ್ಕಾ ಪದಾರ್ಥ ಕೊಡಲು ಕೇಳಿದ್ದಾರೆ. ಆಗ ಹನುಮಕ್ಕ ಗುಟ್ಕಾ ಪದಾರ್ಥ ಕೊಡಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಹನುಮಕ್ಕನವರ ಮೊಮ್ಮಗಳು ಅಂಗಡಿಯಲಿದ್ದುದನ್ನು ಗಮನಿಸಿದ ಆಗಂತುಕರು ಮೊಮ್ಮಗಳಿಗೆ ಸಿಗರೇಟ್ ಕೊಡುವಂತೆ ಕೇಳಿದ್ದಾರೆ. ಆಕೆ ಸಿಗರೇಟ್ ಕೊಡಲು ಮುಂದಾದ ಕೂಡಲೆ, ಮಹಿಳೆಯ ಕೊರಳಿನಲ್ಲಿದ್ದ 25 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವ್ಯಾಪಾರಕ್ಕೆ ಒಬ್ಬಾತ ಹೋಗಿದ್ದಾಗ, ಮತ್ತೊಬ್ಬ ಪಲ್ಸರ್ ಬೈಕ್‍ನ್ನು ಆಫ್ ಮಾಡದೆ, ಚಾಲೂ ಇಟ್ಟುಕೊಂಡಿದ್ದು, ಸರ ಕಿತ್ತುಕೊಂಡಾತ ಬಂದು ಬೈಕ್ ಮೇಲೆ ಕುಳಿತ ಕೂಡಲೆ ಇಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಿಡಿಗೇಶಿ ಠಾಣೆಗೆ ಮಲ್ಲೇಶ್ ಎಂಬುವರು ದೂರು ದಾಖಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಿಡಿಗೇಶಿ ಪೋಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ತೆರಳಿ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನಾಗಿದ್ದಾರೆ.
ಇದೇ ಗ್ರಾಮದಲ್ಲಿ ಫೆ. 25ರಂದು ಕೂಡ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಕಾಂತರಾಜು ಎಂಬುವರು ತಮ್ಮ ಪತ್ನಿ ಸಮೇತ ಊರಿಗೆ ಹೋಗಿದ್ದಾರೆ. ಅಂದು ಅವರ ಮಗ 7ನೆ ತರಗತಿ ವಿದ್ಯಾರ್ಥಿ ಚೇತನ್ ಎಂಬಾತ ಮನೆಯಲ್ಲಿ ಒಬ್ಬನೆ ಓದಿಕೊಂಡು ಕುಳಿತಿದ್ದಾಗ, ದಿಢೀರನೆ ಒಳ ನುಗ್ಗಿದ ಅಪರಿಚಿತ ವ್ಯಕ್ತಿಯೋರ್ವ ಬಾಗಿಲು ಬಂದ್ ಮಾಡಿ, ಬಾಲಕನನ್ನು ಹೊಡೆದು, ಹೆದರಿಸಿ, ಹಣ, ಒಡವೆಗಾಗಿ ಹುಡುಕಾಡಿ ಏನೂ ಸಿಗದಿದ್ದಾಗ ದೇವರ ಹುಂಡಿಯನ್ನು ಹೊತ್ತೊಯ್ದಿದ್ದಾನೆ. ಈ ದುರ್ಘಟನೆಯಿಂದ ಭೀತಿಗೊಳಗಾಗಿದ್ದ ಬಾಲಕ ಮೂರ್ನಾಲ್ಕು ದಿನ ಹುಷಾರಿಲ್ಲದೆ ಮಲಗಿ, ಕ್ರಮೇಣ ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ