ಮಿಡಿಗೇಶಿ :
ಕಳೆದ ನಾಲ್ಕಾರು ವರ್ಷಗಳಿಂದಲೂ ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದೆ, ಬೆಳೆ ಬೆಳೆಯದೆ, ದನಕರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಸಂಕಷ್ಟದಲ್ಲಿರುವ ರೈತರು ತಮ್ಮ ಸಂಸಾರ ನಡೆಸಲು ಹರ ಸಾಹಸ ಪಡುತ್ತಿದ್ದಾರೆ. ಇವರು ಜೀವನ ಸಾಗಿಸಲು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಸೀಮೆ ಹಸು, ನಾಟಿ ಹಸು ಹಾಗೂ ಎಮ್ಮೆಗಳನ್ನು ಸಾಕಿಕೊಂಡು ಡೈರಿಗಳಿಗೆ ಹಾಲು ಹಾಕಿ, ಬರುವ ಹಣದಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ಸ್ಪಂದಿಸಿದ ಸರ್ಕಾರವು ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ. ನೀಡುತ್ತಿದೆ. ಮಾ. 01 ರಂದು ತುಮಕೂರು ಜಿಲ್ಲೆಯ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಿಸಿದ್ದು, ಹಾಲು ಉತ್ಪಾದಕರಿಗೆ ಅನುಕೂಲವಾಗಿದೆ. ಹಾಲನ್ನು ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿಯಾಗಿದೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಬಲ್ಕ್ ಮಿಲ್ಕ್ ಕೂಲರ್ ಕೇಂದ್ರವಿದ್ದು, ಸದರಿ ಕೇಂದ್ರಕ್ಕೆ ಮಿಡಿಗೇಶಿ, ಜಂಗಮಯ್ಯನಪಾಳ್ಯ, ಲಕ್ಲೀಹಟ್ಟಿ, ನಲ್ಲೇಕಾಮನಹಳ್ಳಿ ಗ್ರಾಮಗಳ ಹಾಲು ಉತ್ಪಾದಕರು ಪ್ರತಿದಿನ ಬೆಳಗ್ಗೆ 345 ಲೀಟರ್, ಸಂಜೆ ಸುಮಾರು 320 ಲೀಟರ್ ಹಾಲನ್ನು ಡೈರಿಗೆ ಹಾಕುತ್ತಿದ್ದಾರೆ. ಸದರಿ ಹಾಲು ಉತ್ಪಾದಕರಿಗೆ 2019-20 ನೇ ಸಾಲಿನ ಬೋನಸ್ ಹಣ 2 ಲಕ್ಷದ 45 ಸಾವಿರ ರೂ.ಗಳನ್ನು ಕೇಂದ್ರದಿಂದ ವಿತರಿಸಲಾಗಿದೆ. ಇದರ ಜೊತೆಗೆ ಮಾರ್ಚ್1 ರಿಂದ ತುಮಕೂರು ಹಾಲು ಒಕ್ಕೂಟ ಪ್ರತಿ ಲೀಟರ್‍ಗೆ 2 ರೂ. ದರ ಹೆಚ್ಚಿಸಿದ್ದು, ಮಾರ್ಚ್ ತಿಂಗಳಿನಲ್ಲಿ ಮಿಡಿಗೇಶಿ ಡೈರಿಗೆ ಬಂದಂತಹ ಲಾಭದ 38,000 ಹಣವನ್ನು ಹಾಲು ಉತ್ಪಾದಕರಿಗೆ ಏಪ್ರಿಲ್ ತಿಂಗಳಿನಲ್ಲಿ ವಿತರಿಸಲಾಗಿದೆ ಎಂದು ಡೈರಿ ಕಾರ್ಯದರ್ಶಿ ಮಂಜಣ್ಣ ಪತ್ರಿಕೆಗೆ ತಿಳಿಸಿರುತ್ತಾರೆ. ಸದರಿ ಬಿ.ಎಮ್.ಸಿ ಕೇಂದ್ರವು 25 ಲಕ್ಷ ಹಣವನ್ನು ಠೇವಣಿಯಾಗಿಟ್ಟಿರುವುದಾಗಿ ತಿಳಿದು ಬಂದಿದೆ.
ಆದರೆ ಮಿಡಿಗೇಶಿ ಹೋಬಳಿಯ ನಾಗಲಾಪುರ ಗ್ರಾಮದಲ್ಲಿರುವ ಸರ್ಕಾರಿ ಹಾಲಿನ ಡೈರಿ ಪ್ರಾರಂಭವಾಗಿ ಹತ್ತನ್ನೆರಡು ವರ್ಷಗಳಾಗಿದ್ದು, ಇಲ್ಲಿಯವರೆಗೆ ಹಾಲಿನ ಲಾಭಾಂಶದಿಂದ ಬಂದಂತಹ ಹಣದಲ್ಲಿ ಈವರೆವಿಗೂ ಹಾಲು ಉತ್ಪಾದಕರಿಗೆ ಬೋನಸ್ ಹಣ ನೀಡದಿರುವ ಕಾರಣವಾದರೂ ಏನು?
ಸದರಿ ಹಾಲಿನ ಡೈರಿಗೆ ಹಾಲನ್ನು ಹಾಕುವ ಉತ್ಪಾದಕರೇನಾದರೂ ಆಕಸ್ಮಿಕ ಮರಣ ಹೊಂದಿದಲ್ಲಿ ಕಾರ್ಯದರ್ಶಿಯವರಿಂದ ಹಾಲು ಒಕ್ಕೂಟಕ್ಕೆ ದಾಖಲೆ ಒದಗಿಸಿದಲ್ಲಿ ಸಾವಿಗೀಡಾದ ಕುಟುಂಬಕ್ಕೆ 50,000 ರೂ. ಸಹಾಯಧನ ನೀಡುತ್ತದೆ. ಆದರೆ ಈ ಡೈರಿಯಲ್ಲಿ ಓರ್ವ ವ್ಯಕ್ತಿಗೆ ಮಾತ್ರ ಇತ್ತೀಚಿನ ದಿನಗಳಲ್ಲಿ ಸಹಾಯ ದೊರೆತಿದೆ. ಇನ್ನುಳಿದ ಕೆಲ ಕುಟುಂಬದವರಿಗೆ ದೊರೆತಿಲ್ಲವೆಂಬ ಆರೋಪಗಳಿವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಇತ್ತ ಗಮನಿಸಿ, ಆಗಿರುವ ಅನ್ಯಾಯ ಸರಿಪಡಿಸಲೆಂದು ಹಾಲು ಉತ್ಪಾದಕರು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ