ಖಾತೆ ಬದಲಾವಣೆಗೆ ಬೇಸತ್ತು ರಾಜಿನಾಮೆಗೆ ಸಿದ್ಧನಿದ್ದೆ -ಜೆಸಿಎಂ

 ತುಮಕೂರು : 

      ಸಣ್ಣ ನೀರಾವರಿ ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಜೆ.ಸಿ.ಮಾಧುಸ್ವಾಮಿಯವರು, ಗಣರಾಜ್ಯೋತ್ಸವದ ಧ್ವಜಾರೋಹಣಾ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ ಎಂಬ ಸುದ್ದಿ ಹರಡಿತ್ತು. ಖಾತೆ ಬದಲಾವಣೆಯಿಂದ ನೊಂದಿದ್ದ ತಾವು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧವಾಗಿದ್ದಾಗಿ ಮಾಧುಸ್ವಾಮಿಯವರೇ ಹೇಳಿದರು.

      ಮಂಗಳವಾರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಪತ್ರಕರ್ತರೊಂದಿಗೆ ಈ ವಿಚಾರ ತಿಳಿಸಿದ ಸಚಿವರು, ಜನರ ಬದುಕಿನ ಜೊತೆ ನಂಟು ಇರುವ ಖಾತೆ ಬೇಕು ಎಂದು ಬಯಸಿದ್ದು ನಿಜ. ನಾನು ರೈತ, ಗ್ರಾಮೀಣ ಜನರಿಗೆ ಅನುಕೂಲವಾಗುವ ಕೆರೆಕಟ್ಟೆಗಳಿಗೆ ನೀರು ತುಂಬಿಸುವ, ಅಂತರ್ಜಲ ಹೆಚ್ಚು ಮಾಡುವಂತಹ ಸಣ್ಣ ನೀರಾವರಿ ಖಾತೆ ಬೇಕು ಎಂದು ಕೇಳಿದ್ದೆ ಎಂದರು.

      ನಾಲ್ಕು ದಿನದಲ್ಲಿ ನನಗೆ ನಾಲ್ಕು ಖಾತೆ ಬದಲಾವಣೆ ಮಾಡಲಾಗಿದ್ದಕ್ಕೆ ಬಗ್ಗೆ ಬೇಸರವಾಗಿತ್ತು. ನಿಷ್ಠೆಯನ್ನೇ ದೌರ್ಬಲ್ಯ ಮಾಡುವ ಕೆಲಸ ನಡೆದಿದೆಯೇ ಎಂದು ಅನಿಸಿತ್ತು. ಜನಸಾಮಾನ್ಯರ ಬದುಕಿಗೆ ಹತ್ತಿರವಿರದ ಖಾತೆ ಬೇಡವೆಂದು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದ ನಿಜ ಎಂದು ಹೇಳಿದರು.

      ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ಕರೆ ಮಾಡಿ, ನಿಮ್ಮಲ್ಲಿರುವ ಎರಡು ಖಾತೆಗಳಲ್ಲಿ ಒಂದನ್ನು ಬಿಡಬೇಕಾಗುತ್ತದೆ ಎಂದು ಹೇಳಿದ್ದರು. ಕಾನೂನು ಖಾತೆಯನ್ನು ಬಿಡಲು ಸಿದ್ಧವಾಗಿದ್ದೆ, ಆದರೆ, ಸಣ್ಣ ನೀರಾವರಿಯಿಂದ ಗ್ರಾಮೀಣ ಜನರಿಗೆ ಅನುಕೂಲ ಮಾಡಬಹುದು ಎಂಬ ಉದ್ದೇಶದಿಂದ ಈ ಖಾತೆ ಬಯಸಿದ್ದೆ. ದೊಡ್ಡ ಲಾಭದ ಇನ್ನಾವುದೇ ಖಾತೆ ಕೇಳಿರಲಿಲ್ಲ. ಹಳ್ಳಿಗಳ ಕೆರೆಕಟ್ಟೆ ತುಂಬಿಸುವ, ಅಂತರ್ಜಲ ವೃದ್ಧಿ ಮಾಡುವ ಈ ಖಾತೆ ಬೇಕು ಎಂದು ಇಚ್ಚಿಸಿದ್ದೆ. ಅಂತರ್ಜಲ ಅಭಿವೃದ್ಧಿ, ಅಟಲ್ ಭೂಜಲ್ ಕಾರ್ಯಕ್ರಮಗಳನ್ನು ಈ ಇಲಾಖೆ ವ್ಯಾಪ್ತಿಗೆ ಸೇರಿಸಲು ಪ್ರಯತ್ನಿಸಿದ್ದೆ. ಇದರ ಮೂಲಕ ಜಿಲ್ಲೆಯ ಅನೇಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿತ್ತು ಎಂದ ಸಚಿವ ಮಾಧುಸ್ವಾಮಿಯವರು, ಆಡಳಿತ ಮಾಡುವುದು ನನಗೆ ಗೊತ್ತು, ಯಾರೂ ಹೇಳಿಕೊಡುವ ಅಗತ್ಯವಿಲ್ಲ ಎಂದು ವಿರೋಧಿ ಬಣದವರಿಗೆ ತಿರುಗೇಟು ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಹೆಚ್ಚಿಸಲು ಕ್ರಮ

      ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ವಿಳಂಬವಾಗಿರುವುದು ನಿಜ. ಸ್ಮಾರ್ಟ್ ಸಿಟಿ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಸಮಿತಿ ಮಾಡಿದೆ, ಅದರಲ್ಲಿ ನಾವು ಇಲ್ಲ. ಹಾಗಾಗಿ ಜಿಲ್ಲಾ ಸಚಿವನಾಗಿಯೂ ನಾನು ಅದರಲ್ಲಿ ಹಸ್ತಕ್ಷೇಪ ಮಾಡಲು ಹೋಗಲಿಲ್ಲ. ಆದರೆ, ನಗರದ ಹಿತದೃಷ್ಟಿಯಿಂದ ಇನ್ನು ಸುಮ್ಮನಿರುವುದಿಲ್ಲ. ಕಾಮಗಾರಿಗಳ ವೇಗ, ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳಿಗೆ ಒತ್ತಡ ತರುತ್ತೇನೆ ಎಂದರು.

     ಶಿವಮೊಗ್ಗದಲ್ಲಿ ಗಣಿಕಾರಿಗೆಯ ಜೆಲಿಟಿನ್ ಸ್ಫೋಟದ ನಂತರ ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆಯ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ವಿಶೇಷವಾಗಿ ಸಾಗಾಣಿಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಒಂದು ಸುತ್ತಿನ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap