ತುಮಕೂರು:
ಸ್ವಪಕ್ಷೀಯರ ಮೌನ, ಹೊಸ ಉಸ್ತುವಾರಿ ಸಚಿವರ ಸ್ವಾಗತಕ್ಕೆ ಸಜ್ಜಾದ ಬಿಜೆಪಿ
ಒಂದೆಡೆ ಜಿಲ್ಲಾ ಉಸ್ತುವಾರಿ ಕೈ ತಪ್ಪಿದ್ದ ಸಚಿವ ಮಾಧುಸ್ವಾಮಿ ಪರ ವಿಪಕ್ಷ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ, ಆಡಳಿತರೂಢ ಶಾಸಕರು ಮೌನಕ್ಕೆ ಶರಣಾಗಿದ್ದಾರೆ. ಮತ್ತೊಂದೆಡೆ ಹೊಸ ಜಿಲ್ಲಾ ಉಸ್ತುವಾರಿ ಸಚಿವರ ಸ್ವಾಗತಕ್ಕೆ ಜಿಲ್ಲಾ ಬಿಜೆಪಿ ಸಿದ್ದತೆ ನಡೆಸಿದ್ದಾರೆ. ಈ ಬೆಳವಣಿಗೆ ಜಿಲ್ಲೆಯ ರಾಜಕಾರಣದಲ್ಲಿ ಮುಂದಿನ ರಾಜಕೀಯ ಸ್ಥಿತ್ಯಂತರಗಳಿಗೆ ದಿಕ್ಸೂಚಿಯಾಗಿ ಗೋಚರಿಸತೊಡಗಿದೆ.
ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತÀವರು ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಕೈ ತಪ್ಪಿಸಿ ಹೊರಗಿನವರಿಗೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಐವರು ಶಾಸಕರು ಇಬ್ಬರು ಸಂಸದರನ್ನು ಆಯ್ಕೆ ಮಾಡಿದ ಜಿಲ್ಲೆಯ ಜನತೆಗೆ ಬಿಜೆಪಿ ವಂಚನೆ ಮಾಡುತ್ತಿದೆ.
ಯಾವ ಮನದಂಡದಡಿ ಬಿಜೆಪಿ, ಸಿಎಂ ಉಸ್ತುವಾರಿಗಳ ನೇಮಕ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಬೈರಗೊಂಡ್ಲು ಜಲಸಂಗ್ರಹಗಾರ ಭೂಸ್ವಾಧೀನ ವಿಚಾರವಾಗಿ ಜೆ.ಸಿ.ಮಾಧುಸ್ವಾಮಿ ವಿರುದ್ಧ ಹರಿಹಾಯ್ದಿದ್ದ ಕೊರಟಗೆರೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ.
ಬಿಜೆಪಿ ಸರಕಾರದ ಒಬ್ಬ ಕ್ರಿಯಾಶೀಲ ಸಚಿವರು. ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದು ನಮಗೆ ನಿರಾಸೆಯಾಗಿದೆ. ಇದರಿಂದ ತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿ. ಅವರು ಸ್ವಲ್ಪ ಕೋಪಿಷ್ಠರಾಗಿರಬಹುದು. ಆದರೆ ಸಮರ್ಥ ನಾಯಕ. ಇದು ಬಿಜೆಪಿ ಸರಕಾರದಿಂದ ತುಮಕೂರು ಜಿಲ್ಲೆಯ ಜನತೆಗೆ ಬಿಜೆಪಿ ಮಾಡಿದ ಅನ್ಯಾಯಎಂದು ಜೆಸಿಎಂ ಪರ ಬ್ಯಾಟಿಂಗ್ ಮಾಡಿರುವುದು ರಾಜಕೀಯವಾಗಿ ಅಚ್ಚರಿಗೆ ಕಾರಣವಾಗಿದೆ.
ಸಿಎಂಗೆ ಪತ್ರ ಬರೆದು ತಪ್ಪಿನ ಕ್ರಮವೆಂದ ರಮೇಶ್‍ಬಾಬು
ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ ಕ್ರಮದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು ಅವರು ತುಮಕೂರು ಜಿಲ್ಲೆಯ ಇಬ್ಬರು ಶಾಸಕರಿಗೆ ತಮ್ಮ ಸಂಪುಟದಲ್ಲಿ ಅವಕಾಶ ನೀಡಿರುತ್ತೀರಿ.
ತಾವು ತಮ್ಮ ಪರಮಾಧಿಕಾರದ ಮೂಲಕ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡುವಾಗ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುವ ಸಂಪುಟದರ್ಜೆಯ ಸಚಿವರಿಗೆ ಜಿಲ್ಲೆಯ ಉಸ್ತುವಾರಿ ನೀಡದೇ ಇರುವುದು ಈ ಜಿಲ್ಲೆಗಾಗಿರುವ ವಂಚನೆ ಜೊತೆಗೆ ಕೊ;;ಎಉ ಸಚಿವರು ಉಸ್ತುವಾರಿ ನಿರ್ವಹಿಸಲು ಅಸಮರ್ಥರೇ? ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕಿದ್ದೀರಿ.
ಜಿಲ್ಲೆಯ ಬಿಜೆಪಿ ಸಂಸದರು ಹಿಂದಿನ ಉಸ್ತುವಾರಿ ಸಚಿವರ ಮೇಲೆ ಮಾಡಿದ ಆರೋಪಕ್ಕಾಗಿ ಅವರನ್ನು ಕೈ ಬಿಡುವುದಾದರೆ ಜಿಲ್ಲೆಯ ಇನ್ನೊಬ್ಬ ಸಚಿವರಿಗೆ ಉಸ್ತುವಾರಿ ಅವಕಾಶ ನೀಡಬೇಕಿತ್ತು. ಆದರೆ ಇಬ್ಬರು ಸಚಿವರನ್ನು ಬಿಟ್ಟು ನಮ್ಮ ಜಿಲ್ಲೆಗೆ ಸಂಪರ್ಕವೇ ಇಲ್ಲದ ಶಿವಮೊಗ್ಗ ಜಿಲ್ಲೆಯ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿರುವುದು ಆಡಳಿತ ಕುಂಠಿತಕ್ಕೆ ಕಾರಣವಾಗಲಿದೆ. ಜಿಲ್ಲೆಯ ಸಚಿವರನ್ನೇ ಉಸ್ತುವಾರಿಯಾಗಿ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಸಹ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾನದಂಡವನ್ನು ಪ್ರಶ್ನಿಸಿದ್ದು, ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಹೊರಗಿನವರನ್ನು ತರುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ತುಮಕೂರಲ್ಲಿ ಮಾತ್ರವಲ್ಲಿ ಬೇರೆಡೆಯೂ ಬದಲಾವಣೆ:
ಆದರೆ ಆಡಳಿತಾರೂಢ ಬಿಜೆಪಿ ನಾಯಕರು ಮುಖ್ಯಮಂತ್ರಿ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಹೊರಗಿನವರಿಗೆ ಉಸ್ತುವಾರಿ ಹಂಚಿಕೆ ಬರೀ ತುಮಕೂರು ಜಿಲ್ಲೆಯಲ್ಲಿ ಮಾತ್ರ ಆಗಿಲ್ಲ. ಬೇರೆ ಜಿಲ್ಲೆಗಳಲ್ಲೂ ಮಾಡಲಾಗಿದೆ. ಪಕ್ಷದ ಆದೇಶ, ಸರಕಾರದ ಕ್ರಮವನ್ನು ನಾವು ಸ್ವಾಗತಿಸಲೆಬೇಕು. ಅವರು ಎಲ್ಲವನ್ನು ದೃಷ್ಟಿಯಲ್ಲಿರಿಸಿಕೊಂಡು ತೀರ್ಮಾನ ಕೈಗೊಂಡಿರುತ್ತಾರೆಂದು ಪ್ರಜಾಪ್ರಗತಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಕ್ಷ್ಮೀಶ್ ಪ್ರತಿಕ್ರಿಯಿಸಿದ್ದಾರೆ.
ನೂತನ ಸಚಿವರು ಇಂದು ಆರ್‍ಎಸ್‍ಎಸ್, ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ
ಮಾಧುಸ್ವಾಮಿ ಪರ ಹೇಳಿಕೆ ನೀಡಿರುವ ವಿಪಕ್ಷಗಳ ಈ ನಡೆ ಜಿಲ್ಲೆಯ ಆಡಳಿತಾರೂಢ ಬಿಜೆಪಿ ಶಾಸಕರು, ಮುಖಂಡರು ಪ್ರತಿಕ್ರಿಯಿಸದೆ, ಮೌನಂ ಸಮ್ಮತಿ ಲಕ್ಷ್ಮಣಂ ಎಂಬಂತೆ ಸಿಎಂ ನಿರ್ಧಾರವನ್ನು ಒಪ್ಪಿಕೊಂಡಂತೆ ಹೊಸ ಉಸ್ತುವಾರಿ ಸಚಿವರಾದ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮಂಗಳವಾರ ರಾತ್ರಿಯೇ ತುಮಕೂರಿಗೆ ಬಂದಿಳಿದ ಹೊಸ ಉಸ್ತುವಾರಿ ಸಚಿವರನ್ನು ಸ್ವಾಗತಿಸಿದ ಜಿಲ್ಲಾ ಬಿಜೆಪಿ ಮುಖಂಡರು, ಇಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪಕ್ಷದ ಕಚೇರಿ ಭೇಟಿ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡಿದ್ದಾರೆ.
ಮಾಧುಸ್ವಾಮಿ ಪರ ಒಲವು, ಸಂದೇಹಗಳಿಗೆ ಎಡೆ
ಜಿಲ್ಲಾ ಉಸ್ತುವಾರಿಯಾಗಿದ್ದಾಗ ಮಾಧುಸ್ವಾಮಿ ಅವರ ನಡೆಯನ್ನು ಟೀಕಿಸುತ್ತಿದ್ದ ಕೈ ನಾಯಕರು ಉಸ್ತುವಾರಿಯಿಂದ ಇಳಿಯುತ್ತಲೇ ಮಾಧುಸ್ವಾಮಿ ಪರ ಒಲವು ವ್ಯಕ್ತಪಡಿಸಿದ್ದು, ಜಿಲ್ಲೆಯ ಮುಂದಿನ ರಾಜಕೀಯ ಸ್ಥಿತ್ಯಂತರದ ದಿಕ್ಸೂಚಿಯೆಂದೇ ವಿಶ್ಲೇಷಿಸಲಾಗುತ್ತಿದೆ ಚಿಕ್ಕನಾಯಕನಹಳ್ಳಿಯಲ್ಲಿ ಸೊರಗಿರುವ ಕಾಂಗ್ರೆಸ್‍ಗೆ ಮುಂದೆ ಮಾಧುಸ್ವಾಮಿ ಬೂಸ್ಟರ್ ಆಗುವರೇ ಎಂಬ ಮಾತುಗಳು ಆಗಲೇ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು.
ಕಾಂಗ್ರೆಸ್ ಸೇರುವ ಯತ್ನವನ್ನು ಈಗಾಗಲೇ ಜಿಲ್ಲೆಯ ಬಿಜೆಪಿ, ಜೆಡಿಎಸ್ ನಾಯಕರು ತೆರೆಮರೆಯಲ್ಲಿ ಮಾಡುತ್ತಿರುವುದು ಹಾಗೂ ವಲಸಿಗರಿಗಿಂತ ಸಂಘ ನಿಷ್ಟರಿಗೆ ಇತ್ತೀಚೆಗೆ ಬಿಜೆಪಿಯಲ್ಲಿ ಆದ್ಯತೆ ಹೆಚ್ಚಾಗುತ್ತಿರುವುದು ಮಾಧುಸ್ವಾಮಿ ಅವರ ವಿಚಾರವಾಗಿಯೂ ಅನೇಕ ರಾಜಕೀಯ ಪುಕಾರುಗಳಿಗೆ ಇಂಬು ನೀಡಿದೆ.
– ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
