ನವದೆಹಲಿ :
ಭಾರತದ ಮೂಲದ ಬ್ರಿಟನ್ ನಿವಾಸಿ ವಿರಾಜಿತ್ ಮುಂಗಲೆ ತಾಯಿಯನ್ನು ನೋಡಲು ಲಂಡನ್ ನಿಂದ ಮಹಾರಾಷ್ಟ್ರದ ಥಾಣೆವರೆಗೂ 18,300 ಕಿ.ಮೀ. ದೂರವನ್ನು ವಾಹನ ಚಲಾಯಿಸಿಕೊಂಡು ಬಂದಿದ್ದಾರೆ.
ಬ್ರಿಟನ್, ಫ‍್ರಾನ್ಸ್, ಜರ್ಮನಿ, ರಷ್ಯಾ ಮತ್ತು ಭಾರತ ಸೇರಿದಂತೆ 16 ರಾಷ್ಟ್ರಗಳನ್ನೊಳಗೊಂಡ ಸುಮಾರು 59 ದಿನಗಳ ಕಾಲ ಎಸ್ ಯುವಿ ವಾಹನ ಚಲಾಯಿಸಿಕೊಂಡು ಬಂದು ತಾಯಿಯನ್ನು ನೋಡಲು ಬಂದಿದ್ದಾರೆ.
ಪ್ರತಿದಿನ 400-600 ಕಿ.ಮೀ. ದೂರ ವಾಹನ ಚಲಾಯಿಸುತ್ತಿದ್ದೆ. ಕೆಲವು ಬಾರಿ 1000 ಕಿ.ಮೀ. ಕೂಡ ದಾಟಿದ್ದೇನೆ. ಸುರಕ್ಷತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಾತ್ರಿ ವಾಹನ ಚಲಾಯಿಸುತ್ತಿರಲಿಲ್ಲ ಎಂದು ವಿರಾಜಿತ್ ಮುಂಗಲೆ ತಮ್ಮ ಸಾಹಸದ ಪ್ರಯಾಣವನ್ನು ವಿವರಿಸಿದ್ದಾರೆ.
ಪ್ರತಿಯೊಂದು ದೇಶದಲ್ಲೂ ಕಾನೂನು ಬದ್ಧ ಅನುಮತಿ ಪಡೆದು ಪ್ರಯಾಣಿಸಬೇಕಾಗಿದ್ದರಿಂದ ಸುಮಾರು 2 ತಿಂಗಳು ಬೇಕಾಗಿದ್ದು, ಅಷ್ಟು ದಿನಗಳ ಕಾಲ ಕೆಲಸಕ್ಕೆ ರಜೆ ಹಾಕಿದ್ದಾರೆ.
ವಾಹನ ಪ್ರಯಾಣದ ವೇಳೆ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಅದರಲ್ಲೂ ಬಿಸಿಗಾಳಿ ಪ್ರಭಾವ ಹೆಚ್ಚಾಗಿತ್ತು. ಅಲ್ಲದೇ 5200 ಮೀಟರ್ ಎತ್ತರದಲ್ಲಿ ಪ್ರಯಾಣ ಕೂಡ ಕಷ್ಟಕರವಾಗಿತ್ತು. ಕೆಲವು ಕಡೆ ಚಳಿ ಹೆಚ್ಚಾಗಿದ್ದರೆ, ಕೆಲವು ಕಡೆ ಭಾರೀ ಗಾಳಿ ಮತ್ತು ಇಬ್ಬನಿ ಕಾಡಿತು ಎಂದು ಅವರು ವಿವರಿಸಿದ್ದಾರೆ.
ಬ್ರಿಟನ್ ನಿಂದ ಹೊರಟು ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಪೋಲೆಂಡ್, ಲಿಥುನಿಯಾ, ಲ್ಯಾಟ್ವಿಯಾ, ಎಸ್ಟೊನಿಯಾ, ರಷ್ಯಾ, ಉಜ್ಬೇಕಿಸ್ತಾನ್, ಕೈರಗಿಸ್ತಾನ್, ಚೀನಾ, ಟಿಬೆಟ್, ನೇಪಾಳ ಕೊನೆಯಲ್ಲಿ ಭಾರತಕ್ಕೆ ವಿರಾಜಿತ್ ಪ್ರಯಾಣಿಸಿದ್ದಾರೆ.