ಮಂಡ್ಯ:
ತನ್ನ ಮಗಳ ಸಾವಿಗೆ ಅಪ್ಪನೊಬ್ಬ ವಿಚಿತ್ರ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ತನ್ನ ಮಗಳನ್ನು ಕೊಂದ ಆರೋಪಿಯ ತಂದೆಯನ್ನೇ ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ. ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹೇಗೌಡಯಾದ ಕೊಲೆ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿ. ಈ ಕೊಲೆಯ ಹಿಂದೆ, ರಾಜ್ಯಾದ್ಯಂತ ಸುದ್ದಿಯಾಗಿದ್ದ ಮೇಲುಕೋಟೆ ಶಿಕ್ಷಕಿಯ ಕೊಲೆ ಪ್ರಕರಣವಿದೆ.
ಮಾಣಿಕ್ಯಹಳ್ಳಿ ಗ್ರಾಮದ ದೀಪಿಕಾಳನ್ನು ಅದೇ ಗ್ರಾಮದ ನಿತೀಶ್ ಎಂಬಾತ 2024ರ ಜನವರಿ 22 ರಂದು ಬರ್ಬರವಾಗಿ ಕೊಲೆ ಮಾಡಿದ್ದ. ಇದಕ್ಕೆ ಪ್ರತೀಕಾರವಾಗಿ ದೀಪಳ ತಂದೆ ವೆಂಕಟೇಶ್, ತನ್ನ ಮಗಳ ಹಂತಕನ ತಂದೆ ನರಸಿಂಹೇಗೌಡನ ಹತ್ಯೆ ಮಾಡಿದ್ದಾನೆ. ʼನನ್ನ ಮಗಳನ್ನ ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದೀಯಾʼ ಎನುತ್ತ ಇರಿದು ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ.
ದೀಪಿಕಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಮೇಲುಕೋಟೆಯಲ್ಲಿ ಶಿಕ್ಷಕಿಯಾಗಿದ್ದ ಈಕೆಯನ್ನು 2024 ಜನವರಿ 19ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. 19ರಂದು ನಾಪತ್ತೆಯಾಗಿದ್ದ ದೀಪಿಕಾ, ಜನವರಿ 23ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದು ರಾಜ್ಯ ಮಟ್ಟದ ಸುದ್ದಿಯಾಗಿತ್ತು. ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅವನೇ ಈ ಕೊಲೆ ಮಾಡಿದ್ದು ಎಂದು ಗೊತ್ತಾಗಿತ್ತು.
ಟೀಚರ್ ದೀಪಿಕಾ ಮತ್ತು ನಿತೀಶ್ ನಡುವೆ ಎರಡು ವರ್ಷದಿಂದೂ ಸಲುಗೆ ಇತ್ತು. ಇಬ್ಬರ ಸಲುಗೆ ನೋಡಿ ನಿತೀಶ್‌ಗೆ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ವಾರ್ನಿಂಗ್ ಕೂಡ ಕೊಟ್ಟಿದ್ದರು. ನಿತೀಶ್ ಜೊತೆಗಿನ ಸಲುಗೆ ಬಗ್ಗೆ ಪ್ರಶ್ನಿಸಿದಾಗ ಆತ ತಮ್ಮ ಇದ್ದಂತೆ ಎಂದು ದೀಪಿಕಾ ಹೇಳಿಕೊಂಡಿದ್ದಳು. ಕುಟುಂಬಸ್ಥರ ವಾರ್ನಿಂಗ್ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ದೀಪಿಕಾಳ ಜೊತೆಗಿನ ಒಡನಾಟವಿಲ್ಲದೇ ನಿತೀಶ್ ವ್ಯಗ್ರಗೊಂಡಿದ್ದ. 2024 ಜನವರಿ 19ರಂದು ತನ್ನ ಬರ್ತ್ ಡೇ ನೆಪದಲ್ಲಿ ಬೆಟ್ಟದ ತಪ್ಪಲಿಗೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ದೀಪಿಕಾಳನ್ನು ಆತ ಹತ್ಯೆ ಮಾಡಿದ್ದ.
ಇದಾದ ಬಳಿಕ ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಸ್ಕೆಚ್ಚು ಹಾಕಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿಯ ಮದುವೆ ಸಹ ಇತ್ತು. ನಿತೀಶ್ ತಂದೆ ನರಸಿಂಹೇಗೌಡ ಮನೆಯಿಂದ ಹೋರಹೋದಾಗ ಫಾಲೋ ಮಾಡಿಕೊಂಡು ಹೋದ ವೆಂಕಟೇಶ್, ಊರ ಹೊರಗೆ ಇದ್ದ ಟೀ ಅಂಗಡಿಯಲ್ಲಿ ಕುಳಿತಿದ್ದ ನರಸಿಂಹೇಗೌಡಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ʼನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡುತ್ತಿದ್ದೀಯಾʼ ಎಂದು ಕೂಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ.








