ಬೆಂಗಳೂರು:
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ವಿರುದ್ಧ 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೆಂಗೇರಿಯ ಸರ್ವೇ ನಂಬರ್ 69ರಲ್ಲಿ ಒಟ್ಟು 183 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತು ಇತ್ತು, ಈ ಪೈಕಿ 37.20 ಎಕರೆಯನ್ನು 1973ರಲ್ಲಿ 25 ಜಮೀನುರಹಿತರಿಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಪ್ರತಿ ವ್ಯಕ್ತಿಗೂ 1.20 ಎಕರೆ ಹಂಚಿಕೆಯಾಗಿತ್ತು. ಉತ್ತರಹಳ್ಳಿ-ಕೆಂಗೇರಿ ನಡು ಭಾಗದಲ್ಲಿ ಇರುವ ಈ ಜಾಗದ ಹಲವು ಫಲಾನುಭವಿಗಳು ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಸರ್ಕಾರದ ಅನುಮತಿಯಿಲ್ಲದೆ ಈ ಜಾಗವನ್ನು ಮಾರಾಟ ಮಾಡಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ಸುರೇಂದ್ರ ಎಂಬ ವ್ಯಕ್ತಿ ಮಾರಾಟಕ್ಕೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಎಚ್ಸಿ ಬಾಲಕೃಷ್ಣ ಮತ್ತು ಕೆಲ ಪ್ರಭಾವಿಗಳ ಸಹಕಾರದಿಂದ ಮಾರಾಟಕ್ಕೆ ಮಾಡಿದ್ದಾರೆ ಎಂಬ ಆರೋಪಗಳಿವೆ.
ಕೆಂಗೇರಿ ಗ್ರಾಮದ ಸರ್ವೇ ನಂ: 69 ರ 183 ಎಕರೆ ಸರ್ಕಾರಿ ಸ್ವತ್ತು ಸಂಪೂರ್ಣವಾಗಿ ‘‘ಸರ್ಕಾರಿ ಬಂಡೆ’’ ಪ್ರದೇಶವಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಕಾನೂನು ರೀತ್ಯಾ ಅವಕಾಶವೇ ಇಲ್ಲ. ಹೀಗಿದ್ದರೂ, ಕೆಎನ್ ಸುರೇಂದ್ರ ಅವರ ಬೆನ್ನಿಗಿದ್ದ ಪ್ರಭಾವಿಗಳ ಒತ್ತಡಗಳಿಗೆ ಒಳಗಾಗಿದ್ದ ಕಂದಾಯ ಇಲಾಖೆಯ ಬೆಂಗಳೂರು ದಕ್ಷಿಣ ತಾಲೂಕಿನ ಎಲ್ಲಾ ಅಧಿಕಾರಿಗಳು ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಾ ನಕಲಿ ದಾಖಲೆಗಳ ತಯಾರಿಕೆಗೆ ಅವಕಾಶ ಮಾಡಿಕೊಟ್ಟು, 1,600 ಕೋಟಿ ರೂ. ಮೌಲ್ಯದ ಸರ್ಕಾರಿ ಭೂ ಕಬಳಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಮೊದಲಿಗೆ ರವಿಶಂಕರ್ ಎಂಬ ಸರ್ವೇಯರ್ ಇದಕ್ಕೆ ಸಂಬಂಧಿಸಿದಂತೆ ಸ್ಕೆಚ್ ತಯಾರು ಮಾಡಿದ್ದರೆ, ಲಕ್ಷ್ಮೀದೇವಿ ಎಂಬ ಮತ್ತೊಬ್ಬ ಸರ್ವೇಯರ್ ಇದಕ್ಕೆ ಕಂಪೇರ್ ಸರ್ವೇ ಮಾಡಿ ಕೊಟ್ಟಿರುತ್ತಾರೆ. ಎಡಿಎಲ್ಆರ್ ಸಚಿನ್ ಮತ್ತು ಡಿಎಇಎಲ್ಆರ್ ಮಂಜುನಾಥ್ ಥವನೆ ಅವರು ರಾತ್ರೋರಾತ್ರಿ ಈ ಸ್ವತ್ತಿಗೆ ಪೋಡಿ ಮಾಡಿದ್ದಾರೆ. ಇತ್ತೀಚೆಗೆ ಡಿಸಿಎಲ್ಆರ್ ಹುದ್ದೆಗೆ ಬಂದಿರುವ ಕುಸುಮ ಲತಾ ಅವರು ಇದಕ್ಕೆ ʼಪಹಣಿʼ ನೀಡಲು ಅನುಮೋದನೆ ನೀಡಲು ಕಡತವನ್ನು ಮುಂದಕ್ಕೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಭಾವಿಗಳಲ್ಲದ ಸಾಮಾನ್ಯ ಜನರು ಅವರ ಸ್ವತ್ತುಗಳಿಗೆ ಪೋಡಿ ಮಾಡಲು ಅರ್ಜಿಗಳನ್ನು ನೀಡಿ ವರ್ಷಾನುಗಟ್ಟಲೇ ಇವರ ಕಚೇರಿಗಳಿಗೆ ಅಲೆದಾಡಿದರೂ ಪೋಡಿ ಮಾಡಿಕೊಡದ ಅಧಿಕಾರಿಗಳು ಈ ಪ್ರಕರಣದಲ್ಲಿ ಕೇವಲ 15 ದಿನಗಳಲ್ಲಿ ಕಾನೂನು ಬಾಹಿರವಾಗಿ ಪೋಡಿ ಮಾಡಿಕೊಟ್ಟಿರುತ್ತಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.