3 ವರ್ಷದ ಮಗನ ಕತ್ತು ಸೀಳಿದ ಟೆಕ್ಕಿ!

ಪುಣೆ: 

    ಅಕ್ರಮ ಸಂಬಂಧಕ್ಕೆ ಬಲಿಯಾದ ಮೀರತ್ ನೌಕಾಧಿಕಾರಿ ಸೌರಬ್ ರಜಪೂತ್ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಪುಣೆಯಲ್ಲಿ ಟೆಕ್ಕಿಯೋರ್ವ ತನ್ನ ಪತ್ನಿ ಶೀಲ ಶಂಕಿಸಿ 3 ವರ್ಷದ ಪುಟ್ಟ ಮುಗುವಿನ ಕತ್ತು ಸೀಳಿರುವ ಧಾರುಣ ಘಟನೆ ವರದಿಯಾಗಿದೆ.

    ಪುಣೆಯ ಚಂದನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 38 ವರ್ಷದ ಟೆಕ್ಕಿ ಮಾಧವ್ ಟಿಕೇಟಿ ಎಂಬಾತ ತನ್ನ ಮೂರು ವರ್ಷದ ಮಗ ಹಿಮ್ಮತ್ ಟಿಕೇಟಿಯನ್ನು ಕತ್ತು ಸೀಳಿ ಹತ್ಯೆಗೈದಿದ್ದಾನೆ. ಮಾಧವ್ ಟಿಕೇಟಿ ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದವರಾಗಿದ್ದು, ಟೆಕ್ಕಿ ಮಾಧವ್ ಸ್ವರೂಪಾ ಎಂಬಾಕೆಯನ್ನು ವಿವಾಹವಾಗಿದ್ದರು.

     ಈ ಜೋಡಿಗೆ ಹಿಮ್ಮತ್ ಎಂಬ 3 ವರ್ಷದ ಮಗುವಿತ್ತು. ಇದೇ ಮಗುವನ್ನು ಮಾಧವ್ ಕತ್ತು ಸೀಳಿ ಕೊಂದು ಹಾಕಿದ್ದಾನೆ. ಮಗು ಹತ್ಯೆ ಬಳಿಕೆ ಲಾಡ್ಜ್ ವೊಂದರಲ್ಲಿ ಮಾಧವ್ ಕಂಠಪೂರ್ತಿ ಕುಡಿದುಬಂದಿದ್ದ. ಪ್ರಸ್ತುತ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

    ಇನ್ನು ಮಾಧವ್ ಗೆ ತನ್ನ ಪತ್ನಿ ಸ್ವರೂಪ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕೆ ಇತ್ತು. ಇದೇ ವಿಚಾರವಾಗಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ಕೂಡ ಆಗಿತ್ತು. ಗುರುವಾರ ಮಧ್ಯಾಹ್ನ ದಂಪತಿಗಳ ನಡುವೆ ಜಗಳ ತಾರಕಕ್ಕೇರಿದ್ದು, ಕೋಪಗೊಂಡ ಮಾಧವ್ ಮನೆಯಿಂದ ಹೊರಟುಹೋಗಿದ್ದ. ಹೀಗೆ ಹೋಗುವ ವೇಳೆ ಮಾಧವ್ ತನ್ನ ಪುಟ್ಟ ಮಗನನ್ನೂ ಕೂಡ ಕರೆದುಕೊಂಡು ಹೋಗಿದ್ದ. ಆದರೆ ತಡರಾತ್ರಿಯಾದರೂ ಮಗು ಮತ್ತು ಗಂಡ ಬಾರದ ಹಿನ್ನಲೆಯಲ್ಲಿ ಪತ್ನಿ ಸ್ವರೂಪ ಆತಂಕಗೊಂಡಿದ್ದಳು. ಕೊನೆಗೆ ತಡರಾತ್ರಿ ತನ್ನ ಪತಿ ಮತ್ತು ಮಗ ಕಾಣೆಯಾಗಿದ್ದಾನೆ ಎಂದು ಸ್ವರೂಪ ಇಲ್ಲಿನ ಚಂದನ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

   ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಗುರುವಾರ ಮಧ್ಯಾಹ್ನ 2:30 ಕ್ಕೆ ಮಾಧವ್ ತನ್ನ ಮಗನೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ. ಆದರೆ ನಂತರದ ದೃಶ್ಯಗಳಲ್ಲಿ ಸಂಜೆ 5:00 ಗಂಟೆಗೆ ಅವನು ಒಬ್ಬಂಟಿಯಾಗಿ ಬಟ್ಟೆಗಳನ್ನು ಖರೀದಿಸುತ್ತಿರುವುದು ತೋರಿದೆ.

   ಮಾಧವ್ ನ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು, ಆತ ಲಾಡ್ಜ್ ನಲ್ಲಿರುವುದನ್ನು ಪತ್ತೆ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕಂಠಪೂರ್ತಿ ಕುಡಿದಿದ್ದರಿಂದ ಆತನಿಗೆ ಪ್ರಜ್ಞೆ ಇರಲಿಲ್ಲ. ಬಳಿಕ ಕೆಲ ಹೊತ್ತಿನ ಬಳಿಕ ಮಾಧವ್ ಗೆ ಪ್ರಜ್ಞೆ ಬಂದಿದ್ದು, ಈ ವೇಳೆ ಆತನನ್ನು ವಿಚಾರಿಸಿದಾಗ ಮಗುವನ್ನು ಕೊಂದ ವಿಚಾರ ಬಾಯಿಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಕೊಲೆಯಾದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಅಲ್ಲಿ ಮಗು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೀಗ ಮಾಧವ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

   ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link