ಹುಬ್ಬಳ್ಳಿ
ಒಂದಡೆ ಮಹದಾಯಿ ಯೋಜನೆ ಜಾರಿಯಾಗಲು ಬಿಡಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳುತ್ತಿದ್ದರೇ, ಇನ್ನೊಂದಡೆ ಮಹದಾಯಿ ಯೋಜನೆ ಜಾರಿಗಾಗಿ ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟು ಗೋವಾಕ್ಕೆ ಕೌಂಟರ್ ನೀಡಿದೆ. ಯೋಜನೆ ಜಾರಿಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಇದೀಗ ಕೇಂದ್ರದ ಪರಿಸರ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರವಾನಗಿ ಮಾತ್ರ ಬಾಕಿ ಉಳಿದಿದೆ. ಒಂದು ವೇಳೆ ಪರವಾನಗಿ ಸಿಕ್ಕರೇ, ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ.
ಯೋಜನೆಗೆ ಅನುಮತಿ ನೀಡದಂತೆ ಗೋವಾ ಸರ್ಕಾರ ಕೇಸ್ ಹಾಕಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡದಂತೆ ಗೋವಾ ಸರ್ಕಾರ ಮೇಲಿಂದ ಮೇಲೆ ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇದೆ. ಇದೇ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಲ್ಲಿನ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಕಿತ್ತೂರು ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ನಡುವೆ ಇದೀಗ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಒಂದು ಹೆಜ್ಜೆ ಮುಂದಿಟ್ಟಿದೆ. ಯೋಜನೆ ಜಾರಿಗೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಜುಲೈ 23 ರಂದೇ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ, ಕರಂಬಳ, ಶೇಡಗಾಳಿ, ರೂಮೇವಾಡಿ ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. ಯೋಜನೆಯ ಕಾಮಗಾರಿಗೆ ಬೇಕಾಗಿರುವ ಒಟ್ಟು 9 ಎಕರೆ 27 ಗುಂಟೆ ಭೂ ಸ್ವಾಧಿನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಯೋಜನೆ ಜಾರಿಯಾಗಲು ಬಿಡಲ್ಲ ಅಂತ ಹೇಳಿದ ಕೆಲವೇ ದಿನಗಳಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ, ಯಾವುದೇ ಕಾರಣಕ್ಕೂ ಯೋಜನೆಯನ್ನು ನಿಲ್ಲಿಸೋದಿಲ್ಲ ಎಂಬ ಸಂದೇಶವನ್ನು ರಾಜ್ಯ ಸರ್ಕಾರ ಗೋವಾಕ್ಕೆ ನೀಡಿದೆ. ಸದ್ಯ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ, ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಅನುಮತಿ ಸಿಗುವುದು ಬಾಕಿ ಇದೆ. ಇದನ್ನು ಆದಷ್ಟು ಬೇಗನೆ ಕೇಂದ್ರ ಸಚಿವರು ಕೊಡಿಸುವ ಕೆಲಸ ಮಾಡಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ.
ರಾಜ್ಯದ ಪಾಲಿನ ಕೆಲಸವನ್ನು ಮಾಡಲಾಗಿದೆ. ಇದೀಗ ಕೇಂದ್ರದ ಮೇಲೆ ಪ್ರಲ್ಹಾದ್ ಜೋಶಿ ಸೇರಿದಂತೆ ಎಲ್ಲ ಸಚಿವರು ಒತ್ತಡ ತಂದು ಯೋಜನೆ ಜಾರಿಗೆ ಮುಂದಾಗಬೇಕು ಅಂತ ಆಗ್ರಹಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಯೋಜನೆ ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.
ಮಹದಾಯಿ ಯೋಜನೆ ಕಾಮಗಾರಿಗೆ ಬೇಕಾದ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಆದಷ್ಟು ಬೇಗನೆ ಕೇಂದ್ರದ ವನ್ಯಜೀವಿ ಮಂಡಳಿ ಪರವಾನಗಿ ಕೊಡಿಸುವ ಕೆಲಸವಾದ್ರೆ ಯೋಜನೆಗೆ ಹಿಡದಿರುವ ಗ್ರಹಣ ಬಿಡಲಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದ ಸಚಿವರು ರಾಜಕೀಯ ಪ್ರತಿಷ್ಠೆಯನ್ನು ಬಿಟ್ಟು ಯೋಜನೆ ಜಾರಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.
