ಮಹಾದೇವ್‌ ಬೆಟ್ಟಿಂಗ್‌ APP : ರವಿ ಉಪ್ಪಳ್ ಬಂಧನ….!

ನವದೆಹಲಿ

        ಜಾರಿ ನಿರ್ದೇಶನಾಲಯದ ಆದೇಶದ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ನೋಟಿಸ್ ಆಧಾರದ ಮೇಲೆ ಸ್ಥಳೀಯ ಪೊಲೀಸರು ದುಬೈನಲ್ಲಿ ರವಿ ಉಪ್ಪಳ್ ಜೊತೆಗೆ ಇನ್ನಿಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

   ರವಿ ಉಪ್ಪಳ್ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಉಪ್ಪಳ್ ಅವರನ್ನು ಕಳೆದ ವಾರ ದುಬೈನಲ್ಲಿ ಬಂಧಿಸಲಾಗಿದ್ದು, ಇದೀಗ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದುಬೈ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

    ರವಿ ಉಪ್ಪಳ್ 6,000 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಇದರಲ್ಲಿ ನಿರ್ಗಮಿತ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಹೆಸರೂ ಕೂಡಾ ಕೇಳಿಬಂದಿತ್ತು.

    ಮೂಲಗಳ ಪ್ರಕಾರ, ಜಾರಿ ನಿರ್ದೇಶನಾಲಯದ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್‌ನಿಂದ ಉಪ್ಫಲ್ ಅವರನ್ನು ಬಂಧಿಸಲಾಗಿದೆ. ರವಿಯನ್ನು ಹಸ್ತಾಂತರಿಸಲು ಸಿದ್ಧ ಎಂದು ದುಬೈ ಅಧಿಕಾರಿಗಳು ಭಾರತಕ್ಕೆ ಮಾಹಿತಿ ನೀಡಿದ್ದಾರೆ.ರವಿ ಉಪ್ಪಾಳ್‌ ಪೆಸಿಫಿಕ್‌ ಮಹಾಸಾಗರದ ದ್ವೀಪ ರಾಷ್ಟ್ರ ವನೌಟುದ ಪೌರತ್ವ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ಸೌರಭ್‌ ಚಂದ್ರಕಾರ್‌ ಮತ್ತು ರವಿ ಉಪ್ಪಾಳ್‌ ಆರಂಭಿಸಿದ್ದ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ದುಬೈನಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಇದು ಬೇನಾಮಿ ಖಾತೆಗಳ ಮೂಲಕ ಹಣ ಅಕ್ರಮ ವರ್ಗಾವಣೆ ಮಾಡುತ್ತಿತ್ತು ಎಂದು ಇ.ಡಿ ಆರೋಪಿಸಿದೆ. ಬೆಟ್ಟಿಂಗ್‌ ಆದಾಯವನ್ನು ವಿದೇಶದ ಖಾತೆಗಳಿಗೆ ವರ್ಗಾಯಿಸಲು ದೊಡ್ಡ ಪ್ರಮಾಣದ ಹವಾಲಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು ಎಂದು ಅದು ಹೇಳಿದೆ.

    ಈ ನಡುವೆ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಸೌರಭ್ ಚಂದ್ರಕರ್ ಕೂಡ ಶೀಘ್ರದಲ್ಲೇ ಯುಎಇಯಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆತನ ಬಂಧನದ ಬಳಿಕ ಆತನನ್ನೂ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ