ಸಚಿವ ಮಹದೇವಪ್ಪ ನಿವಾಸದಲ್ಲಿ ದಲಿತ ನಾಯಕರ ಮಹತ್ವದ ಸಭೆ….!

ಬೆಂಗಳೂರು

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಅಭಿವೃದ್ಧಿಗೆ ಮೀಸಲಿದ್ದ 25 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿಗೆ  ಬಳಸಿದೆ ಎಂದು ಆರೋಪಿಸಿ ಬಿಜೆಪಿ ಹೆಜ್ಜೆ ಹೆಜ್ಜೆಗೂ ಹೋರಾಟ ಮಾಡುತ್ತಿದೆ. ಇದರ ಬೆನ್ನಲ್ಲೇ, ಸಚಿವ ಮಹದೇವಪ್ಪ   ನಿವಾಸದಲ್ಲಿ ದಲಿತ ನಾಯಕರೆಲ್ಲಾ ಸೇರಿ ಚರ್ಚೆ ನಡೆಸಿದ್ದಾರೆ. ಗ್ಯಾರಂಟಿಗಳಿಗೆ ದಲಿತರ ಹಣ ನೀಡುವುದರಿಂದ ಎಸ್​ಸಿಪಿ, ಟಿಎಸ್​ಪಿ ಯೋಜನೆಯ ಮೂಲ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಹಾಗಾಗಿ ಸರ್ಕಾರಕ್ಕೆ ಗ್ಯಾರಂಟಿಗಳಿಗೆ ಎಸ್​ಸಿಪಿ, ಟಿಎಸ್​ಪಿ ಹಣ ನೀಡದಂತೆ ಮನವಿ ಮಾಡುವ ಬಗ್ಗೆ ಕೆಲ ಹಿರಿಯ ಶಾಸಕರು ಸಭೆಯಲ್ಲಿ ಸಲಹೆ ನೀಡಿದ್ದಾರೆ. 

    ಎಲ್ಲಾ ಇಲಾಖೆಗಳಿಂದ ದಲಿತ ಸಮಾಜಕ್ಕೆ 42 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ವಾಸ್ತವದಲ್ಲಿ ಕೇವಲ 4 ಸಾವಿರ ಕೋಟಿ ರೂಪಾಯಿ ಮಾತ್ರ ಸಮಾಜಕ್ಕೆ ತಲುಪುತ್ತಿದೆ. ವಿವಿಧ ಇಲಾಖೆಗಳ ಫಲಾನುಭವಿ ಯೋಜನೆಗಳಿಗೆ ಸರಿಸುಮಾರು 2 ಲಕ್ಷಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆ ಆಗುತ್ತದೆ. ಆದರೆ ಮೀಸಲಿಟ್ಟ ಹಣದಲ್ಲಿ ಶೇಕಡ 2ರಷ್ಟು ಮಾತ್ರ ಸಮುದಾಯಕ್ಕೆ ತಲುಪುತ್ತಿದೆ. ಈ ಪ್ರಮಾಣ ಕನಿಷ್ಠ ಶೇಕಡ 40 ರಷ್ಟಾದರೂ ಏರಿಕೆಯಾದರೆ ದಲಿತ ಸಮುದಾಯಕ್ಕೆ ಲಾಭಕರ ಎಂದು ಸಭೆಯಲ್ಲಿ ನಾಯಕರು ಚರ್ಚಿಸಿದ್ದಾರೆ. 

    2011ರ ಜನಗಣತಿ ಆಧಾರದಲ್ಲಿ ಒಳ ಮೀಸಲಾತಿ ಘೋಷಣೆ ಬಗ್ಗೆ ಕೆಲವರ ಬೇಡಿಕೆ ಇದೆ. ಆದರೆ ಕಳೆದ 15 ವರ್ಷಗಳಲ್ಲಿ ಸಮುದಾಯದ ಸಂಖ್ಯೆ ಸಾಕಷ್ಟು ಏರಿಕೆ ಆಗಿದೆ. ಹೀಗಾಗಿ ಜನಗಣತಿಯ ಅಂಕಿಅಂಶ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಪ್ರಸ್ತುತ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಕಟಿಸಬೇಕು. ಹಾಗಾಗಿ ಸರ್ಕಾರ ವೈಜ್ಞಾನಿಕವಾಗಿ ಒಳ ಮೀಸಲಾತಿ ನೀಡುವ ಬಗ್ಗೆ ಚಿಂತಿಸಬೇಕು. ಇನ್ನೊಂದೆಡೆ ಬಿಜೆಪಿ, ಮಾದಿಗ ಸಮಾಜದ ಹೋರಾಟಕ್ಕೆ ಸಾಥ್ ನೀಡುತ್ತಿದೆ. ರಾಜಕೀಯವಾಗಿ ಹೋರಾಟ ರೂಪುಗೊಳ್ಳುವಂತೆ ಮಾಡುತ್ತಿದೆ. ಈ ಸಮಯದಲ್ಲಿ ಮಾದಿಗ ಸೇರಿದಂತೆ ಎಲ್ಲಾ ದಲಿತ ಒಳ ಸಮುದಾಯಕ್ಕೆ ಸೂಕ್ತ ಮಾಹಿತಿ ನೀಡಬೇಕು. ಸಮಾಜದ ಒಳತಿಗಾಗಿ ಕೈಗೊಳ್ಳುವ ಕ್ರಮದ ಬಗ್ಗೆ ಸಂಪೂರ್ಣವಾಗಿ ವಿವರಿಸಬೇಕು ಎಂದು ದಲಿತ ನಾಯಕರು ಸಭೆಯಲ್ಲಿ ಸಲಹೆ ನೀಡಿದರು.

    ಸದ್ಯ ದಲಿತ ಸಮಾಜಕ್ಕೆ ಹೆಚ್ಚಿನ ಅನುದಾನ ಕೋರಿ ಹಾಗೂ ಒಳ ಮೀಸಲಾತಿ ವಿಚಾರದಲ್ಲಿ ಸೂಕ್ತವಾದ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ದಲಿತ ಸಚಿವರು ಶೀಘ್ರದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

Recent Articles

spot_img

Related Stories

Share via
Copy link