ಪ್ರಯಾಗ್ ರಾಜ್:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಾರಿತಪ್ಪಿಸುವ ಫೋಸ್ಟ್ ಮಾಡಿದ್ದ ಆರೋಪದ ಮೇಲೆಎಂಟು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಮಹಾಕುಂಭ ಮೇಳ 2025 ‘ಸಾವಿನ ಹಬ್ಬ’ ಎಂದು ಮಾಡಲಾದ X ಪೋಸ್ಟ್ ವೊಂದರಲ್ಲಿ ಒಂದೇ ಕುಟುಂಬದ ಮೂವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರು ಶವಗಾರದಿಂದ ಮೃತದೇಹವನ್ನು ಪಡೆದು ಭುಜದ ಮೇಲೆ ಹೊತ್ಯೊಯ್ದರು ಎಂದು ಬರೆಯಲಾಗಿತ್ತು.
ಬಳಿಕ ಪರಿಶೀಲನೆ ನಂತರ ಈ ಫೋಸ್ಟ್ ನಲ್ಲಿ ಬಳಸಲಾದ ವಿಡಿಯೋ ನೇಪಾಳದ್ದು ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಏಳು ಎಕ್ಸ್ ಖಾತೆದಾರರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದರಲ್ಲಿ ಮೃತದೇಹಗಳು ಮಹಾಕುಂಭ ಮೇಳದ ನದಿಯಲ್ಲಿ ತೇಲುತ್ತಿವೆ. ಮೃತದೇಹಗಳನ್ನು ನದಿಗೆ ಎಸೆಯುವ ಮೊದಲು ಇನ್ನೂ ಜೀವಂತವಿರುವ ಮೂತ್ರಪಿಂಡಗಳನ್ನು ತೆಗೆಯಲಾಗುತ್ತಿದೆ ಎಂದು ತಪ್ಪಾಗಿ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ತಪ್ಪುದಾರಿಗೆಳೆಯುವ ವಿಡಿಯೋಗಳು ಉತ್ತರ ಪ್ರದೇಶ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿಯುವ ಮತ್ತು ಸಾರ್ವಜನಿಕರ ಅಸಮಾಧಾನವನ್ನು ಕೆರಳಿಸುವ ಪ್ರಯತ್ನವಾಗಿದೆ. ಈ ಸಾಮಾಜಿಕ ಮಾಧ್ಯಮ ಖಾತೆದಾರರ ವಿರುದ್ಧ ಕೊತ್ವಾಲಿ ಮಹಾಕುಂಭ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ (ಕುಂಭ) ರಾಜೇಶ್ ದ್ವಿವೇದಿ ತಿಳಿಸಿದರು.