ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ, ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎನ್ನಲಾಗುತ್ತದೆ.ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ.
ಚಳಿಗಾಲ ಕೊನೆಗೊಂಡು ವಸಂತ ಮತ್ತು ಬೇಸಿಗೆ ಪ್ರಾರಂಭವಾದಾಗ, ಋತು ಬದಲಾಗುವ ದಿನವನ್ನು ಮಹಾಶಿವರಾತ್ರಿಯ ಹೆಸರಿನಲ್ಲಿ ಎಲ್ಲೆಡೆ ಆಚರಿಸಲಾಗುತ್ತದೆ ಎಂದೂ ಹೇಳಲಾಗುತ್ತದೆ.ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡಲಾಗುತ್ತದೆ ಎಂಬುದರಿಂದ ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ಮಹಾ ಪರ್ವದಿದ ಎಂಬವರೆಗೆ ಹಲವು ಪೌರಾಣಿಕ ಕಥೆಗಳು ಮಹಾಶಿವರಾತ್ರಿಗೆ ತಳುಕು ಹಾಕಿಕೊಂಡಿವೆ.
ಮತ್ತೊಂದು ಕಥೆಯ ಪ್ರಕಾರ ಮಹಾ ಶಿವರಾತ್ರಿಯನ್ನು ಶಿವನ ಸೃಷ್ಟಿ, ಸ್ಥಿತಿ ಲಯಗಳ ತಾಂಡವ ನೃತ್ಯ ಎಂದೂ ಹೇಳಲಾಗುತ್ತದೆ. ಸಮುದ್ರಮಥನದ ವೇಳೆ ಉದ್ಭವವಾದ ಹಾಲಾಹಲವನ್ನು ಜಗತ್ತಿನ ಉಳಿವಿಗಾಗಿ ಶಿವ ಕುಡಿದ, ಪರಿಣಾಮ ಆತನ ಕುತ್ತಿಗೆ ಭಾಗ ನೀಲಿಯಾಯಿತು. ಇದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರೂ ಬಂದಿದೆ.
ದಕ್ಷಿಣದ ರಾಮೇಶ್ವರಮ್ ನಿಂದ ಉತ್ತರದ ಕಾಶ್ಮೀರದವರೆಗೂ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲಿಯೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಮಹಾಶಿವರಾತ್ರಿಯ ದಿನದಂದು ಸಾಧ್ಯವಿರುವವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಭ್ರವಾದ ಶ್ವೇತ ವಸ್ತ್ರ ಧರಿಸಿ ಶಿವನ ಪೂಜೆಯಲ್ಲಿ ತೊಡಗಬಹುದಾಗಿದೆ. ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ, ಶ್ರೀಗಂಧ, ತುಪ್ಪ, ಸಕ್ಕರೆ ಮತ್ತು ಇತರ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡುವ ಕ್ರಮ ಹಲವೆಡೆ ಕಾಣಬಹುದಾಗಿದೆ.
24 ಗಂಟೆಗಳ ಪೂಜಾ ಕೈಂಕರ್ಯಗಳ ಬಳಿಕ, ಮರುದಿನ ಬೆಳಿಗ್ಗೆ ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ. ಭಕ್ತರು ಉಪವಾಸ ವ್ರತಾಚರಣೆಯಲ್ಲಿದ್ದಾಗ ಸಾತ್ವಿಕ, ಆಹಾರಗಳಾದ ಹಣ್ಣುಗಳು, ತರಕಾರಿಗಳನ್ನು ಸೇವಿಸಬಹುದಾಗಿರುತ್ತದೆ. ಉಪವಾಸ ಸಂದರ್ಭದಲ್ಲಿ ಸಾತ್ವಿಕ ಆಹಾರವನ್ನು ಹೊರತುಪಡಿಸಿ ಅಕ್ಕಿ, ಗೋಧಿ ಅಥವಾ ಬೇಳೆಕಾಳುಗಳಿಂದ ಬೇಯಿಸಿದ ಆಹಾರ ಪದಾರ್ಥವನ್ನು ಸೇವಿಸುವಂತಿಲ್ಲ. ಅಲ್ಲದೇ ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸಾಹಾರಿ ಊಟವನ್ನು ಭಕ್ತರು ತ್ಯಜಿಸಬಹುದಾಗಿದೆ. ಈ ರೀತಿಯ ಶಿವರಾತ್ರಿ ಆಚರಣೆ ಅಹಂಕಾರ ಅವನತಿಗೆ ಕಾರಣವಾಗುತ್ತದೆ ಎಂಬುದು ನಂಬಿಕೆಯಾಗಿದೆ.
ಯಾಮ ಎಂಬ ಶಬ್ದ ಕಾಲ ಸೂಚಕವಾಗಿದೆ. ಒಂದು ಯಾಮ ಎಂದರೆ ಮೂರು ತಾಸುಗಳ ಅವಧಿಯಾಗಿರುತ್ತದೆ. ಹೆಸರೇ ಹೇಳುವಂತೆ ಶಿವರಾತ್ರಿ ರಾತ್ರಿ ವೇಳೆ ನಡೆಯುವ ಧಾರ್ಮಿಕ ಕ್ರಿಯೆಯಾಗಿರುವುದರಿಂದ 12 ತಾಸುಗಳ ರಾತ್ರಿಯ ಅವಧಿಯನ್ನು 4 ಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ಶಿವರಾತ್ರಿಯ ದಿನದಂದು ಮೊದಲ ಪೂಜೆಯನ್ನು ಸಂಜೆ 6 ಗಂಟೆಯಿಂದ ಆರಂಭಿಸಿ 9 ಗಂಟೆಯವರೆಗೂ ಆಚರಣೆ ಮಾಡಲಾಗುತ್ತದೆ. (ಮೊದಲ ಯಾಮ ಪೂಜೆ ಸೂರ್ಯಾಸ್ತದ ಮೇಲೆ ಅವಲಂಬನೆಯಾಗಿರುತ್ತದೆ) 2ನೇ ಅವಧಿಯ ಪೂಜೆ ರಾತ್ರಿ 9 ರಿಂದ 12 ವರೆಗೆ ನಡೆಯಲಿದೆ. 3 ನೇ ಯಾಮ ಪೂಜೆ ಮಧ್ಯ ರಾತ್ರಿ 12 ರಿಂದ 3 ಗಂಟೆವರೆಗೆ ನಡೆಯಲಿದ್ದು 4 ನೇ ಯಾಮ ಪೂಜೆ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ನಡೆಯಲಿದೆ.
ಏಕಾದಶ ರುದ್ರ ಪಠಣ ಇರುವ ಯಾಮ ಪೂಜೆಯಲ್ಲಿ ಮತ್ತೊಂದು ವಿಶೇಷವಿದೆ. ಅದೇನೆಂದರೆ ಒಂದು ಯಾಮ ಪೂಜೆಯಿಂದ ಮತ್ತೊಂದು ಯಾಮ ಪೂಜೆಗೆ ರುದ್ರಪಠಣ ದ್ವಿಗುಣಗೊಳ್ಳುತ್ತದೆ. ಸತತ ಹದಿನಾಲ್ಕು ವರ್ಷಗಳ ವರೆಗೆ ಈ ರೀತಿಯ ಶಿವರಾತ್ರಿ ವ್ರತವನ್ನು ಆಚರಿಸಿದರೆ ಉತ್ತಮ ಫಲ ಸಿಗಲಿದೆ ಎಂಬ ನಂಬಿಕೆ ಇದೆ.
