ಬೆಂಗಳೂರು ರೋಡ್‌ ರೇಜ್‌ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್

ಬೆಂಗಳೂರು

    ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ನಡೆದ ರೋಡ್ ರೇಜ್ (ರಸ್ತೆ ಕಾಳಗ) ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ ದೊರೆತಿದ್ದು, ಪೊಲೀಸರು ಇದೀಗ ವಿಂಗ್ ಕಮಾಂಡರ್‌ ಬೋಸ್ ವಿರುದ್ಧವೇ ಹತ್ಯಾ ಪ್ರಯತ್ನ ಕೇಸ್ ದಾಖಲಿಸಿದ್ದಾರೆ.

    ನಗರದಲ್ಲಿನ ವಿಂಗ್ ಕಮಾಂಡರ್‌ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆರಂಭದಲ್ಲಿ ಕನ್ನಡ ಭಾಷಾ ವಿಷಯಕ್ಕಾಗಿ ನಡೆದ ಜಗಳ ಎಂದು ವೈರಲ್ ಆಗಿತ್ತಾದರೂ ಬಳಿಕ ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

   ಇನ್ನು ವಿಂಗ್‌ ಕಮಾಂಡರ್‌ ಸ್ವತಃ ವಿಡಿಯೋ ಮೂಲಕ ತನ್ನ ಮೇಲೆ ಕನ್ನಡಿಗನೊಬ್ಬ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಮುಖಕ್ಕೆ ರಕ್ತ ಬರಿಸಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಇದನ್ನೇ ನಂಬಿದ ಪೊಲೀಸರು, ಯುವಕನ ವಿರುದ್ಧ ಎಫ್​​ಐಆರ್ ದಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣ ವೈರಲ್ ಆಗುತ್ತಲೇ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಇದೇ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಬೋಸ್​ನ ನವರಂಗಿ ಆಟ ಬಟಾಬಯಲಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ. ಬದಲಾಗಿ ವಿಂಗ್ ಕಮಾಂಡ್​ ಬೋಸ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.

   ಸ್ಥಳೀಯರು ಎಷ್ಟೇ ಬಿಡಿಸಲು ಪ್ರಯತ್ನಿಸಿದ್ದರೂ ಸಹ ಕೇಳದ ಬೊಸ್​ ಯುವಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಯುವಕ ನೆಲಕ್ಕೆ ಬಿದ್ದರೂ ಸಹ ಕೇಳದೇ ಮನಬಂದಂತೆ ಥಳಿಸಿದ್ದಾನೆ. ಅಲ್ಲದೇ ಯುವಕನ ಮೊಬೈಲ್​ಕಿತ್ತುಕೊಂಡು ಎಸೆದಿದ್ದಾನೆ. ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಪೊಲೀಸರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಅವರ ಮೇಲೆ ಬಿಎನ್‌ಎಸ್‌ನ ಇನ್ನೂ ಕೆಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

   “ವಿಕಾಸ್ ಕುಮಾರ್ ಅಪರಾಧ ಸಂಖ್ಯೆ 87/25 ಯುಎಸ್ 109,115(2),304.324, & 352 ಬಿಎನ್‌ಎಸ್ ಸೋಮವಾರ ಸಂಜೆ 7 ಗಂಟೆಗೆ ನೀಡಿದ ದೂರಿನ ಮೇರೆಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿಲಾದಿತ್ಯ ಬೋಸ್ ವಿರುದ್ಧ ಪ್ರಕರಣ ದಾಖಲಾಗಿದೆ” ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ ದೇವರಾಜ ಮಾಧ್ಯಮಗಳಿಗೆ ತಿಳಿಸಿದ್ದಾರೆ.

   ಬಿಎನ್‌ಎಸ್‌ನ ಸೆಕ್ಷನ್ 109 ಜಾಮೀನು ರಹಿತವಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಬೋಸ್ ಸುಲಭವಾಗಿ ಜಾಮೀನು ಪಡೆಯಲು ಅರ್ಹನಲ್ಲ ಮತ್ತು ವಿಚಾರಣೆಯವರೆಗೆ ಬಂಧನದಲ್ಲಿರ ಬೇಕಾಗಬಹುದು. ಈ ಅಪರಾಧವು cognizable ಆಗಿದ್ದು, ಪೊಲೀಸರು ವಾರಂಟ್ ಇಲ್ಲದೆ ಬೋಸ್ ಅವರನ್ನು ಬಂಧಿಸಬಹುದು ಮತ್ತು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ, ಅಂದರೆ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ.

   ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಪೊಲೀಸರು ಬೋಸ್ ಅವರನ್ನು ಕೇಳುವ ಸಾಧ್ಯತೆಯಿದ್ದು, ಅವರು ಪ್ರತಿಕ್ರಿಯಿಸದಿದ್ದರೆ, ಅವರನ್ನು ಬಂಧಿಸಲು ಪೊಲೀಸರ ತಂಡ ಕೋಲ್ಕತ್ತಾಗೆ ಹೋಗಲಿದೆ ಎಂದು ಹೇಳಲಾಗಿದೆ.