ಒಟಿಟಿಗೆ ಬಂತು ಬಾಕ್ಸ್ ಆಫೀಸ್​ನಲ್ಲಿ ದಾಖಲೆ ನಿರ್ಮಿಸಿದ ಮಹಾವತಾರ ನರಸಿಂಹ

ಬೆಂಗಳೂರು :

    ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತ ಪಡಿಸಿದ ಮಹಾವತಾರ್‌ ನರಸಿಂಹ ಚಿತ್ರ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 325.65 ಕೋಟಿ ರೂ. ಗಳಿಸಿದ್ದು, ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಭಾರತದ ಅನಿಮೇಷನ್‌ ಸಿನಿಮಾ ಎನಿಸಿಕೊಂಡು ದಾಖಲೆ ಬರೆಯಿತು. ಇದೀಗ ಈ ಚಿತ್ರ ಒಟಿಟಿಗೆ ಲಗ್ಗೆಯಿಟ್ಟಿದೆ. ಅಶ್ವಿನ್‌ ಕುಮಾರ್‌ ನಿರ್ದೇಶನದ ಈ ಚಿತ್ರ, ಪೌರಾಣಿಕ ಕಥೆಯನ್ನು ಆನಿಮೇಷನ್‌ ರೂಪದಲ್ಲಿ ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು.

   ಮಹಾವತಾರ್‌ ನರಸಿಂಹ 2ಡಿ ಮತ್ತು 3ಡಿ ಮಾದರಿಯಲ್ಲಿ ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ  ರಿಲೀಸ್‌ ಆಗಿತ್ತು. ಪುರಾಣದಲ್ಲಿ ಬರುವ ವಿಷ್ಣುವಿನ ಅವತಾರವಾದ ನರಸಿಂಹನ ಕಥೆಯನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತೆರೆಗೆ ತರಲಾಗಿದೆ. ಪ್ರಹ್ಲಾದ ಭಕ್ತಿ, ಹಿರಣ್ಯಕಶಿಪುವಿನ ಕ್ರೌರ್ಯ, ನರಸಿಂಹಾವತಾರದ ವೈಭವವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ.

  ಸುಮಾರು 2 ಗಂಟೆ 10 ನಿಮಿಷಗಳ ಈ ಚಿತ್ರ ಮಕ್ಕಳನ್ನೂ ಆಕರ್ಷಿಸಿದ್ದು, ದೇಶದೆಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಂಡಿತ್ತು. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿ 56 ದಿನಗಳ ದೀರ್ಘ ಕಾಯುವಿಕೆಯ ನಂತರ, ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದಿದ್ದರೆ, ಈಗ ನೀವು ನಿಮ್ಮ ಮನೆಯಿಂದಲೇ ವೀಕ್ಷಿಸಬಹುದು. ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ಗುರುವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12.30 ರಿಂದ ದೇಶಾದ್ಯಂತ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. 

  ಇದು ಆನಿಮೇಡೆಡ್‌ ಸರಣಿ ಚಿತ್ರವಾಗಿದ್ದು ʼಮಹಾವತಾರ್ ಪರಶುರಾಮ್ʼ (2027), ʼಮಹಾವತಾರ್ ರಘುನಂದನ್ʼ (2029), ʼಮಹಾವತಾರ್ ದ್ವಾರಕಾದೀಶ್‌ʼ (2031), ʼಮಹಾವತಾರ್ ಗೋಕುಲಾನಂದʼ (2033), ʼಮಹಾವತಾರ್ ಕಲ್ಕಿ ಪಾರ್ಟ್ 1ʼ (2035), ʼಮಹಾವತಾರ್ ಕಲ್ಕಿ ಪಾರ್ಟ್ 2ʼ (2037) ಹೀಗೆ ಇವು 2 ವರ್ಷಗಳ ಅಂತರದಲ್ಲಿ ಬಿಡುಗಡೆಯಾಗಲಿವೆ. ಈ ಸರಣಿಯ ಮುಂದುವರಿದ ಭಾಗವಾಗಿ ‘ಮಹಾವತಾರ ಪರಶುರಾಮ’ ಸೀರಿಸ್‌ ತಯಾರಿಸಲು ನಿರ್ಮಾಣ ಸಂಸ್ಥೆ ಯೋಜನೆ ಹಾಕಿಕೊಂಡಿದೆ.

Recent Articles

spot_img

Related Stories

Share via
Copy link