ಮೈಸೂರು:
ಮಹಿಷ ದಸರಾವನ್ನು ಸುಸೂತ್ರವಾಗಿ ಆಚರಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಹೀಗಾಗಿ ಈ ಬಾರಿಯ ನಾಡಹಬ್ಬ ದಸರಾ ಉತ್ಸವಕ್ಕೆ ಅಡ್ಡಿ ಪಡಿಸಲಾಗುವುದು ಎಂದು ಕಾಂಗ್ರಸ್ನ ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಬೆದರಿಕೆ ಹಾಕಿದ್ದಾರೆ.
ನಗರದ ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಗಬೇಕಾಗಿತ್ತು. ಆದರೆ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ. ನಮ್ಮ ಭಾವನೆಗಳಿಗೆ ಧಕ್ಕೆ ತರಲಾಗಿದೆ. ದಸರಾ ಉತ್ಸವವನ್ನು ನೀವು ಯಾವ ರೀತಿ ಆಚರಿಸುತ್ತಿರೋ ನೋಡುತ್ತೇವೆ. ಈ ವಿಚಾರವಾಗಿ ಜಿಲ್ಲಾಡಳಿತಕ್ಕೆ ಸವಾಲು ಹಾಕುತ್ತೇವೆ ಎಂದರು.
ಮಹಿಷ ದಸರಾ ವಿಚಾರವಾಗಿ ಪರ-ವಿರೋಧದ ಅಭಿಪ್ರಾಯಗಳು ಹಾಗೂ ಹೋರಾಟದ ಎಚ್ಚರಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯವರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳನ್ನು ಪೊಲೀಸರು ಮನವೊಲಿಸಿ ಸಿಎಂ ಸಿದ್ದರಾಮಯ್ಯ ಬಳಿಗೆ ಕರೆದೊಯ್ದರು. ನಂತರ ಜಿಲ್ಲಾಡಳಿತದ ಅನುಮತಿಯೊಂದಿಗೆ ರಾತ್ರಿ 8.30ರ ಹೊತ್ತಿನಲ್ಲಿ ಪುರುಷೋತ್ತಮ್ ಶ್ರೀ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಲಿತ ಮುಖಂಡ ಕಲ್ಲಹಳ್ಳಿ ಕುಮಾರ್ ಚಾಮುಂಡಿಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು.
ಚಾಮುಂಡಿ ಬೆಟ್ಟ ಧಾರ್ವಿುಕ ಪ್ರದೇಶ. ಅದು ತಾಯಿ ಚಾಮುಂಡೇಶ್ವರಿಯ ಆಸ್ತಿ. ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಈ ಭಾವನೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಣೆ ಮಾಡಿದರೆ ನಮಗೆ ಸಂತೋಷ.