ಶಿವರಾಮ ಕಾರಂತ ಬಡಾವಣೆ : ಯಥಾಸ್ಥಿತಿ ಕಾಯ್ದುಕೊಳ್ಳಿ : ಹೈಕೋರ್ಟ್

ಬೆಂಗಳೂರು:

      ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ಹೈಕೋರ್ಟ್ ಬಡಾವಣೆ ನಿರ್ಮಾಣದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಆದೇಶಿಸಿದೆ.

    ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್‌ ಮತ್ತು ಎಂ ನಾಗಪ್ರಸನ್ನ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ನ್ಯಾಯಾಲಯದ ಅನುಮತಿ ಇಲ್ಲದೇ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಬಾರದು ಎಂದು ರಾಜ್ಯ ಸರ್ಕಾರ ಮತ್ತು ಬಿಡಿಎಗೆ ಪೀಠವು ನಿರ್ದೇಶನ ನೀಡಿದೆ.

    ವಾದ, ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸದಂತೆ ಆದೇಶಿಸಿ, ಬಡಾವಣೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಅನುಮತಿಸಿದೆ. ಬಡಾವಣೆಯ ಸಮಸ್ಯೆಗಳನ್ನು ಪರಿಹರಿಸದೇ ಬಿಡಿಎಯಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ, ಅಧಿಸೂಚನೆ ಹೊರಡಿಸದಂತೆ ನಿರ್ಬಂಧ ವಿಧಿಸಿದೆ.

    ಶಿವರಾಮ ಕಾರಂತ ಬಡಾವಣೆಯ ದಾಖಲೆಗಳನ್ನು ನಿವೃತ್ತ ನ್ಯಾಯಮೂರ್ತಿ ವಿ ಚಂದ್ರಶೇಖರ್ ನೇತೃತ್ವದ ಸಮಿತಿ ತನ್ನ ಬಳಿಯೇ ಇರಿಸಿಕೊಂಡಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಸಮಿತಿ ದಾಖಲೆಗಳನ್ನು ಬಿಡಿಎಗೆ ಹಸ್ತಾಂತರಿಸಿಲ್ಲ. ಹೀಗಾಗಿ, ದಾಖಲೆಗಳಿರುವ ಕೊಠಡಿಯ ಬೀಗದ ಕೀಲಿಕೈ ಸಮಿತಿಯ ಬಳಿ ಇದೆ ಎಂದು ಬಿಡಿಎ ವಾದ ಮಂಡಿಸಿರುವ ಹಿನ್ನೆಲೆಯಲ್ಲಿ ಆ ಕೊಠಡಿಗೆ ಮತ್ತೊಂದು ಬೀಗ ಹಾಕಿ ಆ ಕೀಲಿಕೈ ಅನ್ನು ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್ ಅವರಿಗೆ ನೀಡುವಂತೆ ನ್ಯಾಯಾಲಯ ಬಿಡಿಎಗೆ ಸೂಚನೆ ನೀಡಿದೆ.

    ಬಿಡಿಎ ಪರ ಹಾಜರಿದ್ದ ವಕೀಲ ಶಿವಪ್ರಸಾದ್ ಶಾಂತನಗೌಡರ್ ಅವರು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಎಲ್ಲಾ ದಾಖಲೆಗಳನ್ನು ಬಿಡಿಎಗೆ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿತ್ತು. ಆದರೆ, ಸಮಿತಿ ದಾಖಲೆಗಳನ್ನು ಪ್ರಾಧಿಕಾರಕ್ಕೆ ಇನ್ನೂ ಹಸ್ತಾಂತರ ಮಾಡಿಲ್ಲ ಎಂದು ಹೇಳಿದರು.

     ಅರ್ಜಿದಾರರ ಪರ ವಕೀಲರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಹಲವು ದೂರುಗಳು ಬಾಕಿ ಇವೆ. ಹಲವರು ಹಕ್ಕು ಮಂಡಿಸಿದ್ದಾರೆ. ಬಡಾವಣೆ ನಿರ್ಮಾಣ ಕಾಮಗಾರಿ ಮುಂದುವರಿಸಬಹುದು. ಆದರೆ, ಹಂಚಿಕೆ ಮಾಡಿದರೆ ಅರ್ಜಿದಾರರ ಹಕ್ಕು ಮೊಟಕಾಗಲಿದೆ. ಹೀಗಾಗಿ ನಿವೇಶನ ಹಂಚಿಕೆಗೆ ಅವಕಾಶ ನೀಡಬಾರದು ಎಂದು ಕೋರಿದ್ದರು.

     ಬೆಂಗಳೂರಿನ ಹೊರವಲಯದಲ್ಲಿ 2,700 ಎಕರೆಗೂ ಅಧಿಕ ಪ್ರದೇಶದಲ್ಲಿ ಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಿಸುತ್ತಿದ್ದು, ಭೂಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಕೊನೆಗೆ ನ್ಯಾಯಾಲಯಗಳು ಭೂ ಸ್ವಾಧೀನವನ್ನು ಎತ್ತಿಹಿಡಿದಿದ್ದವು. ಆದರೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು.

    ಆ ಹಿನ್ನೆಲೆಯಲ್ಲಿ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ನೇತೃತ್ವದ ತ್ರಿ ಸದಸ್ಯ ಸಮಿತಿಯನ್ನು 2020ರ ಡಿಸೆಂಬರ್‌ 3ರಂದು ರಚನೆ ಮಾಡಿತ್ತು. ಆ ಸಮಿತಿ ನ್ಯಾಯಾಲಯದ ನಿರ್ದೇಶನದಂತೆ ಹಸ್ತಕ್ಷೇಪ ಮಾಡಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿತು. ಸಮಿತಿಯ ಅವಧಿ 2023ರ ಡಿಸೆಂಬರ್‌ 31ಕ್ಕೆ ಮುಕ್ತಾಯವಾಗಿತ್ತು.

    ಸಮಿತಿಯ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ ಬಿ ಚಂದ್ರಶೇಖರ್ ಯಾವ ಉದ್ದೇಶಕ್ಕಾಗಿ ಸಮಿತಿ ರಚನೆ ಮಾಡಲಾಗಿತ್ತೋ ಆ ಉದ್ದೇಶ ಬಹುತೇಕ ಈಡೇರಿರುವುದರಿಂದ ಸಮಿತಿ ಮುಂದುವರಿಸುವುದು ಅಗತ್ಯವಿಲ್ಲ, ಸಮಿತಿಯ ಅಧಿಕಾರಾವಧಿ ಮುಂದುವರಿಸದೆ ವಿಸರ್ಜನೆ ಮಾಡಬಹುದು ಎಂದು ಹೇಳಿದ್ದರು. ಆದರೆ ಸಮಿತಿಯ ಇತರೆ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಹಲವು ದೂರುಗಳಿದ್ದು, ಅವುಗಳನ್ನು ಪರಿಹರಿಸಬೇಕಾಗಿರುವುದರಿಂದ ಸಮಿತಿಯ ಅಧಿಕಾರವಾವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

   ಆದರೆ, ಸುಪ್ರೀಂ ಕೋರ್ಟ್ ಆ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಿ ಅದೇ ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹೊಸ ವಿಭಾಗೀಯ ಪೀಠವನ್ನು ರಚನೆ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap