ಮೋದಿ ಸಂಪುಟಕ್ಕೆ ಮೇಜರ್‌ ಸರ್ಜರಿ….!

ನವದೆಹಲಿ: 

         ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರಾಗಿರುವ ಅರ್ಜುನ್‌ ರಾಮ್‌ ಮೇಘ್ವಾಲ್‌ ಅವರಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ನ್ಯಾಯಾಂಗ ಸಚಿವ ಸ್ಥಾನ ನೀಡಲಾಗಿದೆ ಎಂದು ಈ ಬಗ್ಗೆ ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ.   ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಪುಟ ಪುನಾರಚನೆಗೆ ಅನುಮೋದನೆ ನೀಡಿದ್ದಾರೆ. ಇದೀಗ ಕಿರಣ್ ರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ಭೂ ವಿಜ್ಞಾನ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.

    ಅದೇ ಸಮಯದಲ್ಲಿ ರಿಜಿಜು ಬದಲಿಗೆ ಅರ್ಜುನ್ ರಾಮ್ ಮೇಘವಾಲ್​ ಅವರ ಅಸ್ತಿತ್ವದಲ್ಲಿರುವ ಖಾತೆಗೆ ಹೆಚ್ಚುವರಿಯಾಗಿ ಕಾನೂನು ಹಾಗೂ ನ್ಯಾಯ ಸಚಿವಾಲಯ ರಾಜ್ಯ ಸಚಿವರಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ರಿಜಿಜು ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ.

     ಕಿರಣ್​ ರಿಜಿಜು ಅವರು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್​ ಜಿಲ್ಲೆಯಲ್ಲಿ 1971 ನವೆಂಬರ್ 19ರಂದು ಜನಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಅವರು 2004ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ 2009ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. 2014ರ ಚುನಾವಣೆಯಲ್ಲಿ ರಿಜಿಜು ಮತ್ತೊಮ್ಮೆ ಗೆದ್ದು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು.

     ಇದರ ನಂತರ ಅವರನ್ನು ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಅಂದರೆ 2019ರಲ್ಲಿ ಕ್ರೀಡಾ ಸಚಿವರನ್ನಾಗಿ ನೇಮಿಸಲಾಯಿತು. ಜುಲೈ 2021ರಲ್ಲಿ ಸಂಪುಟ ವಿಸ್ತರಣೆ ಸಮಯದಲ್ಲಿ ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಗಿತ್ತು.ರವಿಶಂಕರ್ ಪ್ರಸಾದ್ ಬದಲಿಗೆ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು.

     ನ್ಯಾಯಾಂಗ ಮತ್ತು ಕೊಲಿಜಿಯಂ ಬಗ್ಗೆ ನೀಡಲಾದ ಹೇಳಿಕೆಗಳ ಸಂಬಂಧ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದರು. ಕೊಲಿಜಿಯಂ ವಿಚಾರದಲ್ಲಿ ಕಿರಣ್‌ ರಿಜಿಜು ಅಸಮಾಧಾನ, ಸುಪ್ರೀಂಕೋರ್ಟ್‌ ವಿರುದ್ಧದ ತಿಕ್ಕಾಟದ ನಡುವೆಯೇ ಕೇಂದ್ರ ಸರ್ಕಾರ ಕ್ಯಾಬಿನೆಟ್‌ ಪುನರ್‌ರಚನೆ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap