ಅಗತ್ಯಕ್ಕನುಗುಣವಾಗಿ ಯೋಜನೆ ರೂಪಿಸಲು ಸರ್ಕಾರದ ಸೂಚನೆ ….!

ಬೆಳಗಾವಿ:

   ಪ್ರತಿ ತಿಂಗಳು ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಿ ಕಾಲವೆಗಳಿಗೆ ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂಗಳವಾರ ಸೂಚನೆ ನೀಡಿದರು.

    ಸವದತ್ತಿಯ ನವಿಲುತೀರ್ಥದಲ್ಲಿರುವ ಸುಪರಿಂಟೆಂಡಿಂಗ್ ಎಂಜಿನಿಯರ್ ಕಚೇರಿಯಲ್ಲಿ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರೇಣುಕಾಸಾಗರ (ನವೀಲುತೀರ್ಥ) ಅಣೆಕಟ್ಟು ಕಟ್ಟಿದ ಬಳಿಕ ಕಳೆದ ಐವತ್ತು ವರ್ಷಗಳಲ್ಲಿ ಐದನೇ ಬಾರಿಗೆ ಜಲಾಶಯ ತುಂಬುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

    ಮುಂಬರುವ ಪ್ರವಾಹ ಭೀತಿ, ರೈತರಿಗೆ ಅನುಕೂಲ ಆಗಲು ಮುಂದಿನ ವರ್ಷ 2025ರ ಜುಲೈ ತಿಂಗಳವರೆಗೆ ನೀರನ್ನು ಯಾವಾಗ ಬಿಡಬೇಕು, ಕುಡಿಯಲು ಎಷ್ಟು ನೀರು ಸಂಗ್ರಹಿಸಬೇಕು, ಕೆರೆ ಮತ್ತು ಕೆನಾಲ್​ಗಳಿಗೆ ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ಇಂದು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿದ್ದೇವೆ. ಶಾಸಕರು, ರೈತರು ಸೇರಿ ಎಲ್ಲರ ಅಭಿಪ್ರಾಯ ಪಡೆದಿದ್ದೇನೆ ಎಂದು ಹೇಳಿದರು.

    ಪ್ರತಿವರ್ಷದಂತೆ ರೇಣುಕಾ ಯಲ್ಲಮ್ಮದೇವಿಗೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಇಂದು ಕಾಲುವೆಗಳಿಗೆ 200 ಕ್ಯೂಸೆಕ್ ನೀರು ಬಿಡುತ್ತೇವೆ. ಮುಂದಿನ‌ ಊರುಗಳು ಮತ್ತು ಜಮೀನುಗಳಿಗೆ ನೀರು ನುಗ್ಗದಂತೆ ನೋಡಿಕೊಂಡು ನಾಳೆಯಿಂದ 8-10 ಸಾವಿರ ಕ್ಯೂಸೆಕ್ ನೀರು ಬಿಡಲಾಗುವುದು‌ ಎಂದು ತಿಳಿಸಿದರು.

    ಜುಲೈ 2025ರವರೆಗೆ 37 ಟಿಎಂಸಿ ಒಟ್ಟು ಸ್ಟೋರೇಜ್ ಇದ್ದು, ಇದರಲ್ಲಿ 15 ಟಿಎಂಸಿ ಕುಡಿಯುವ ನೀರಿಗೆ ಬಳಕೆ ಆಗಲಿದೆ. ಇನ್ನು ಮಳೆಗಾಲ ಇರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇರುವುದಿಲ್ಲ. ಸವದತ್ತಿ ಯಲ್ಲಮ್ಮದೇವಿಗೆ ಪೂಜೆ ಸಲ್ಲಿಸಿ ಶುಕ್ರವಾರ ಇಲ್ಲವೇ ಮಂಗಳವಾರ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತೇವೆ ಎಂದು ಮಾಹಿತಿ ನೀಡಿದರು.

   ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಜಲಾಶಯ ತುಂಬಲು ಕೆಲವೇ ಅಡಿ ಬಾಕಿಯಿದೆ. ಆದರೆ, ಇನ್ನೂ ಕಾಲುವೆಗಳ ದುರಸ್ತಿ ಮತ್ತು ಹೂಳೆತ್ತುವ ಕೆಲಸ ಆಗಿಲ್ಲ. ಅನುದಾನ ಬಂದು ಎಷ್ಟು ದಿನ ಆಯಿತು? ಯಾವಾಗ ಕೆಲಸ ಕೈಗೊಳ್ಳುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಇದಕ್ಕೆ ಧ್ವನಿಗೂಡಿಸಿದ ರೈತರು, ಈ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಎಸಿ ಕಚೇರಿಯಲ್ಲಿ ಕುಳಿತು ಕಾಮಗಾರಿ ಮಾಡಿದ್ದೇವೆ ಎಂದು ಸುಳ್ಳು ದಾಖಲೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಈಗ ಆಗಿರುವ ಲೋಪ ಸರಿಪಡಿಸಿ, ಇನ್ಮುಂದೆ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

    ಸಭೆಯಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಮಲಪ್ರಭಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link