‘ಅಪವಿತ್ರ’ ಮೈತ್ರಿಯನ್ನು ಸೋಲಿಸಿ : ಸಿಎಂ ಕರೆ

ಮೈಸೂರು:

     ‘ಅಪವಿತ್ರ’ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸೋಲಿಸಿ ಎಂದು ಮಂಡ್ಯ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಕರೆ ನೀಡಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೂಲಕ ವೇದಿಕೆ ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿತು.

    ಇಷ್ಟು ದಿನ ಜಾತ್ಯತೀತರು ಎಂದು ಹೇಳುತ್ತಿದ್ದ ಜೆಡಿಎಸ್ ಇದೀಗ ಕೇಸರಿ ಉಡುಗೆ ತೊಟ್ಟಿದೆ. ಸ್ವತಂತ್ರ ನಿಲುವು ತಳೆಯುವ ಮಂಡ್ಯದ ಜನರು ಬಿಜೆಪಿ-ಜೆಡಿಎಸ್‌ ಮೈತ್ರಿ ಸೋಲು ಕಾಣುವಂತೆ ಮಾಡಬೇಕು ಎಂದು ಹೇಳಿದರು.

    ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿರುವುದು, ಮೋದಿಯವರನ್ನು ವಿಪರೀತ ಹೊಗಳುತ್ತಿರುವುದು ನನಗೆ ತುಂಬಾ ಆಶ್ಚರ್ಯ ಆಗಿದೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಗೆ ಯಾವತ್ತೂ ವಿರುದ್ಧವಾಗಿರುತ್ತೇವೆ ಎಂದಿದ್ದರು. ಈಗ ತಮ್ಮ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

    ದೇವೇಗೌಡರು ಮೋದಿಯವರನ್ನು ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ ಅಂತಲೂ ಎನ್ನುತ್ತಾರೆ. ಗೌಡರು ಹೀಗೇಕಾದರು ಎಂದು ಆಶ್ಚರ್ಯವಾಗಿದೆ. ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಹೊಗಳುತ್ತಾರೆ. ಹೀಗೆ ಧ್ವಂಧ್ವ ನೀತಿ ಅನುಸರಿಸುತ್ತಿದ್ದಾರೆ. ಈ ದೇಶದ ಪ್ರಧಾನ ಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

    ಇಂದು ನಾಡಿನ ಜನತೆ ನಿಮ್ಮ ಹಾಗೆ ಪ್ರಜ್ಞಾವಂತರಾಗಿದ್ದಾರೆ. ಇವರ ಹೇಳಿಕೆಗಳನ್ನು ಪರಿಶೀಲಿಸಿ ತುಲನೆ ಮಾಡುವಷ್ಟು ತಿಳಿವಳಿಕೆ ನಾಡಿನ ಜನರಿಗೆ ಬಂದಿದೆ. ರಾಜಕೀಯವಾಗಿ ದೇವೇಗೌಡರು ತಮ್ಮ ಕುಟುಂಬದ ಉಳಿವಿಗಾಗಿ ಯಾವುದೇ ನಿರ್ಧಾರಕ್ಕೆ ಬಂದರೂ ಜನರು ಕಣ್ಣುಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕು ಎನ್ನುವ ಸಂದರ್ಭ ಈಗ ಇಲ್ಲ ಎಂದರು.

    ಬಳಿಕ ಸುಮಲತಾ ಸ್ಪರ್ಧೆ ಕುರಿತು ಮಾತನಾಡಿ, ಮಾಜಿ ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಂದ ಗೆದ್ದಿದ್ದಾರೆಯೇ ಹೊರತು ಬಿಜೆಪಿಯಿಂದಲ್ಲ ಎಂದು ಪ್ರತಿಪಾದಿಸಿದರು,

   ಮಂಡ್ಯದಿಂದ ಸುಮಲತಾ ಅವರನ್ನು ಮತ್ತೆ ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ, ಪರ್ಯಾಯ ಅಭ್ಯರ್ಥಿಯಾಗಿ ಇನ್ನೂ ನಿರ್ಧಾರವಾಗಿಲ್ಲ. ಅವರು ಯಾರನ್ನಾದರೂ ಕಣಕ್ಕಿಳಿಸಲಿ, ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಈ ಬಾರಿ ನೀವು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದರು. 

   ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಆರ್‌ಆರ್‌ಎಸ್‌ನಿಂದ ಆರು ಮಂದಿಯನ್ನು ಆಯ್ಕೆ ಮಾಡಿದ್ದಕ್ಕೆ ಮಂಡ್ಯ ಜನತೆಗೆ ಧನ್ಯವಾದ. ಕರ್ನಾಟಕದ ಮತದಾರರು ಪ್ರಬುದ್ಧರಾಗಿದ್ದು, ಬಿಜೆಪಿಯ ಸುಳ್ಳು ಭರವಸೆಗಳಿಗೆ ಎಂದಿಗೂ ನಂಬುವುದಿಲ್ಲ ಎಂದು ಹೇಳಿದರು.

     ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಬರ ನಿರ್ವಹಣೆಯಲ್ಲಿ ಸರ್ಕಾರ ಗಂಭೀರವಾಗಿ ತೊಡಗಿಸಿಕೊಂಡಿದ್ದರೂ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರು ಬಿಜೆಪಿ ಮೇಲೆ ಗಾಢ ಪ್ರೀತಿ ಬೆಳೆಸಿಕೊಂಡಿದ್ದಾರೆ. 50 ಕೋಟಿ ಪಾವತಿಸಿ ಮೈಶುಗರ್ ಕಾರ್ಖಾನೆಗೆ ಸರ್ಕಾರ ಚಾಲನೆ ನೀಡಿದ್ದು, ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಬದ್ಧವಾಗಿದೆ. 6,000 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿಯೊಂದು ಕುಟುಂಬವೂ ಲಾಭ ಪಡೆಯುತ್ತಿದೆ. ಇದು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap