ಉಡುಪಿಯಲ್ಲಿ ಮಳೆ ಆರ್ಭಟ; ಮಣಿಪಾಲ ರಸ್ತೆಯಲ್ಲಿ ಪ್ರವಾಹದಂತೆ ಹರಿದ ಕೆಸರು, ಕಲ್ಲುಗಳ ರಾಶಿ

ಉಡುಪಿ: 

    ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಬಿರುಸಿನ ಮಳೆಯಿಂದಾಗಿ  ಉಡುಪಿ-ಮಣಿಪಾಲ ರಸ್ತೆಯಲ್ಲಿ ಮಂಗಳವಾರ ಕೃತಕ ಪ್ರವಾಹ ಸೃಷ್ಟಿಯಾಗಿದ್ದು, ಕೆಸರು, ಕಲ್ಲುಗಳ ರಾಶಿ ಹರಿದುಬಂದಿದ್ದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ನದಿಯಂತೆ ನೀರು ಹರಿದಿದ್ದು, ಕೆಸರು ನೀರಿನ ಜತೆಗೆ ಕಲ್ಲು ಮಣ್ಣು ರಸ್ತೆ ಮೇಲೆ ಹರಿದಿದೆ. ಉಡುಪಿಯ ಪ್ರಮುಖ ರಸ್ತೆಯಾಗಿರುವ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ ಎಂದು ಹೇಳಲಾಗಿದೆ.

    ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳು ಸಹ ಮುಳುಗಿದ ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟಕರವಾಗಿತ್ತು. ಬೆಳಗ್ಗೆಯಿಂದಲೇ ಇದೇ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು, ಅಲ್ಲದೆ ಮಣಿಪಾಲಕ್ಕೆ ಪರ್ಯಾಯ ಮಾರ್ಗಗಳ ಮೂಲಕ ತೆರಳುತ್ತಿದ್ದಾರೆ. ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

   ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹು ಮಹಡಿ ಕಟ್ಟಡಗಳು ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾದ ಎಲ್ಲಾ ಕಟ್ಟಡದ ಪಾರ್ಕಿಂಗ್ ಪ್ರದೇಶಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

Recent Articles

spot_img

Related Stories

Share via
Copy link