ಮುಂಬೈ:
2008ರ ಸೆ.29ರಂದು ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಂಡದಲ್ಲಿದ್ದ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಮೆಹಿಬೂಬ್ ಮುಜಾವರ್ ಸ್ವತಃ ತನಿಖೆ ಹಿಂದಿನ ಸಂಚನ್ನು ಇದೀಗ ಬಹಿರಂಗಪಡಿಸಿದ್ದಾರೆ. ಈ ಪ್ರಕರಣದ ಮೂಲಕ ʼಕೇಸರಿ ಭಯೋತ್ಪಾದನೆʼಎಂಬ ಹಸಿ ಸುಳ್ಳನ್ನೇ ಸತ್ಯವಾಗಿ ಬಿಂಬಿಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ. ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ಎಂಬ ಕಟ್ಟುಕಥೆಯ ಭಾಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸಲು ತನಗೆ ಸೂಚನೆ ನೀಡಲಾಗಿತ್ತು ಎಂದು ಎಟಿಎಸ್ ತನಿಖಾ ತಂಡದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಮೆಹಿಬೂಬ್ ಮುಜಾವರ್ ಹೇಳಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಮುಜಾವರ್, ʼಎಟಿಎಸ್ ನಡೆಸಿರುವುದು ನಕಲಿ ತನಿಖೆ. ನಕಲಿ ಅಧಿಕಾರಿಯೇ ಇದರ ನೇತೃತ್ವ ವಹಿಸಿದ್ದರು. ಕೇಸರಿ ಭಯೋತ್ಪಾದನೆ ಇತ್ತೆಂಬ ಸುಳ್ಳನ್ನೇ ಸಾಬೀತುಪಡಿಸುವ ದಿಕ್ಕಿನಲ್ಲಿ ಸಾಗಿದ್ದ ಇದೊಂದು ನೆಪಮಾತ್ರದ ತನಿಖೆ ಆಗಿತ್ತು. ಇದು ಮನವರಿಕೆಯಾಗಿ ಕೋರ್ಟ್ ರದ್ದುಗೊಳಿಸಿದೆʼ ಎಂದು ಹೇಳಿದರು.
ನ್ಯಾಯಾಲದ ಈ ತೀರ್ಪು ನಕಲಿ ಅಧಿಕಾರಿ ನಡೆಸಿದ ನಕಲಿ ತನಿಖೆಯನ್ನು ಬಹಿರಂಗಪಡಿಸಿದೆ. ಎಟಿಎಸ್ ಸುಳ್ಳು ಕಥೆ ಹೆಣೆದಿದೆ ಎಂಬುದನ್ನು ನ್ಯಾಯಾಲಯವೇ ಹೇಳಿದೆʼ ಎಂದಿರುವ ಮುಜಾವರ್, ಈ ನಕಲಿ ತನಿಖೆಯಲ್ಲಿ ಹಿರಿಯ ಅಧಿಕಾರಿಯ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಈ ಸ್ಫೋಟ ಪ್ರಕರಣದಲ್ಲಿ ರಾಮ್ ಕಲ್ಸಂಗ್ರಾ, ಸಂದೀಪ್ ಡಾಂಗೆ, ದಿಲೀಪ್ ಪಾಟಿದಾರ್ ಮತ್ತು ಮೋಹನ್ ಭಾಗವತ್ ಸೇರಿದಂತೆ ಹಲವರನ್ನು ಗುರಿಯಾಗಿಸಲು ನನಗೆ ಗೌಪ್ಯವಾಗಿ ಸೂಚನೆ ನೀಡಲಾಗಿತ್ತು. ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಮೇಲಿಂದ ಮೇಲೆ ಆದೇಶ ಬಂದಿತು ಎಂದು ತನಿಖೆ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು ನಿವೃತ್ತ ಇನ್ಸ್‌ಪೆಕ್ಟರ್ ಮೆಹಿಬೂಬ್ ಮುಜಾವರ್.
ನಾನು ಯಾವುದೇ ಆದೇಶಗಳನ್ನು ಪಾಲಿಸಲಿಲ್ಲ. ಮೋಹನ್ ಭಾಗವತ್ ಅವರಂತಹ ಉನ್ನತ ವ್ಯಕ್ತಿತ್ವವುಳ್ಳವರ ಬಂಧನ ನನ್ನ ಸಾಮರ್ಥ್ಯಕ್ಕೆ ನಿಲುಕದ್ದಾಗಿತ್ತು, ಮೀರಿದ್ದಾಗಿತ್ತು. ಹಾಗಾಗಿ ನಾನು ಆ ಆದೇಶ ಪಾಲಿಸಲಿಲ್ಲ. ಇದೇ ಕಾರಣಕ್ಕೆ ನನ್ನ ವಿರುದ್ಧ ಸಹ ಸುಳ್ಳು ಪ್ರಕರಣ ದಾಖಲಿಸಲಾಯಿತು. ಇದು ನನ್ನ 40 ವರ್ಷಗಳ ವೃತ್ತಿ ಜೀವನವನ್ನೇ ಹಾಳು ಮಾಡಿತುʼ ಎಂದು ಬೇಸರ ವ್ಯಕ್ತಪಡಿಸಿದ ಮುಜಾವರ್, ಈ ಕುರಿತಂತೆ ತಮ್ಮ ಬಳಿ ಸಾಕ್ಷ್ಯ, ಪುರಾವೆಗಳಿವೆ ಎಂದೂ ಹೇಳಿದರು.
ಆಗ ಎಟಿಎಸ್ ಯಾವ ತನಿಖೆ ನಡೆಸಿತು? ಮತ್ತು ಏಕೆ? ಎಂಬುದನ್ನು ನಾನು ಹೇಳಲಾರೆ. ಆದರೆ ಆ ಆದೇಶಗಳನ್ನು ಅನುಸರಿಸುವಂತಿರಲಿಲ್ಲ. ಅಷ್ಟು ಭಯಾನಕ ಮತ್ತು ಆತಂಕಕಾರಿ ಆಗಿರುತ್ತಿದ್ದವು” ಎಂದಷ್ಟೇ ಹೇಳಿದ ಅವರು, ʼಕೇಸರಿ ಭಯೋತ್ಪಾದನೆʼಎಂಬುದು ಶುದ್ಧ ಸುಳ್ಳು. ʼಕೇಸರಿ ಭಯೋತ್ಪಾದನೆʼ ಅಸ್ತಿತ್ವದಲ್ಲೇ ಇಲ್ಲವೆಂದು ಸ್ಪಷ್ಟವಾಗಿ ತಳ್ಳಿ ಹಾಕಿದರು.
ʼ ಒಟ್ಟಾರೆ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯೇ ಒಂದು ನಕಲಿʼ ಎಂದು ಆರೋಪಿಸಿದ ಮುಜಾವರ್, ಆರಂಭದಲ್ಲಿ ಎಟಿಎಸ್ ತನಿಖೆ ನಡೆಸುತ್ತಿತ್ತು. ಹಸಿ ಹಸಿ ಸುಳ್ಳುಗಳನ್ನೇ ಬಿಂಬಿಬಲು ಪ್ರಯತ್ನಿಸಲು ಹೊರಟಿತ್ತು. ಹೀಗಾಗಿ ಪ್ರಕರಣವನ್ನು ನಂತರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸಲಾಯಿತು ಎಂದರು.
